ಇದು ಬರೀ ಉಸ್ಮಾನಿನ ಕಥೆಯಲ್ಲ


ಅವನು ಹಿಂತಿರುಗಿ ಬಂದಾಗ ಎಲ್ಲವೂ ಹಿಂದಿನಂತಿರಲಿಲ್ಲ. ಎಲ್ಲಾ ಹಳ್ಳಿಗಳ ಚಿತ್ರದಂತಿರದೆ, ಪೇಟೆಯಿಳಿದರೆ ಇರುವ ಊರುಮನೆ, ಅರ್ಧ ಕಿಲೋಮೀಟರ್ ದಾಟುತ್ತಿದ್ದಂತೆ ಮನೆಗಳು ದೂರವಾಗುತ್ತಾ ಸಾಗಿ ಎದುರಾಗುವ ವಿಶಾಲವಾದ ಗದ್ದೆಗಳು; ತೋಟಗಳು ಅದರಂಚಿನಲ್ಲಿ ಅಥವಾ ನಡುವಿನಲ್ಲಿ ಇರುವ ಮನೆಗಳು ಅದಕ್ಕಂಟಿಕೊಂಡಂತಿರುವ ಕಾಡು; ಹೊಳೆಯನ್ನು ಹೊಂದಿರುವ ಊರಿನ ಪೇಟೆಯ ಹೃದಯಭಾಗದಿಂದ ಕೆಳಗಿಳಿದು ಸಾಗಿರುವ ಡಾಂಬರಿನ ಹಾದಿಯ ಮೇಲ್ತುದಿಯಲ್ಲಿ ನಿಂತವನಿಗೂ ಹಾಗೆಯೇ ಅನಿಸಿತು. ಮೆಲ್ಲಮೆಲ್ಲನೆ ಕಂಬಳಿಯನ್ನು ಹೊದ್ದಂತೆ ಸಂಜೆಯ ಕತ್ತಲು ಹಬ್ಬಿಸುತ್ತಿದ್ದ ಆ ಹೊತ್ತು ಆರನ್ನು ಸಮೀಪಿಸುತ್ತ್ತಾ, ಮೀರಿಸುವುದರ ಸನ್ನಾಹದಲ್ಲಿ ಓಡುತ್ತಿತ್ತು.. ಅಲ್ಲಲ್ಲಿ ಸುಳಿಯುವ ಗಾಳಿ ಸಖನನ್ನು ಕಂಡು ಸಂಭ್ರಮಿಸುವ ಹುಡುಗಿಯಂತೆ ನವಿರಾಗಿ ಬೀಸುತ್ತಾ, ಮನ ಬಂದಂತೆ ತಿರುಗುತ್ತಾ , ಸಂಜೆಯ ಸಡಗರದಲ್ಲಿ ಮುಳುಗಿ ಅವನ ಸುತ್ತಲೂ ಸಣ್ಣ ಸದ್ದಿನೊಡನೆ ‘ಬರ್’ ಎಂದು ಸುತ್ತುತಿತ್ತು. ಹಳೇಕಡಬಗೆರೆಯಿಂದ ಸಾಗುವ ಚಿಕ್ಕಮಗಳೂರಿನ ಡಾಂಬರು ರಸ್ತೆಯಿಂದ ಮಣ್ಣಿನ ದಾರಿಯಾಗಿ ಕವಲೊಡೆದು, ಪೇಟೆಯಿಂದ ನೇರ ಕೆಳಗಿಳಿದಿರುವ ಈ ದಾರಿ ಖಾಂಡ್ಯಕ್ಕೆ ಸಾಗುವ ದಾರಿಗೆ ತಾಕುವಲ್ಲಿ ಇದು ತನ್ನ ಸಂಪರ್ಕ ಕೊಂಡಿಯನ್ನು ಬೆಸೆದ ರಸ್ತೆಯಲ್ಲಿ ಮೇಯಲು ಕಾಡಿಗಟ್ಟಿದ ಜಾನುವಾರುಗಳು ತಮ್ಮ ನೆಲೆಯ ನೆನಪಿನಲ್ಲಿ, ಕುತ್ತಿಗೆಯಲ್ಲಿ ತೂಗು ಹಾಕಿದ್ದ ಬಿದಿರಿನ ಘಂಟೆಯನ್ನು ತೂಗುತ್ತಾ ಮಧುರವಾದ ಸದ್ದನು ಸಂಜೆಯ ಸುಂದರ ಕéಣಗಳಿಗೆ ಜೋಡಿಸುತ್ತಿದ್ದವು. ಒಂದರ ಹಿಂದೆ ಒಂದು ಮತ್ತು ಅಲ್ಲಲ್ಲಿ ಚದುರಿಕೊಂಡು ನಡೆಯುತ್ತಿದ್ದ ಜಾನುವಾರುಗಳಲ್ಲಿ ಕೆಲವೊಂದು ದನಗಳು ನಿಂತು ಹುಚ್ಚೆ ಹೊಯ್ದು ಮುಂದೆ ನೆಡೆ0ುುತ್ತ್ತಿದ್ದವು. ಇನ್ನೂ ಕೆಲವು ರಸ್ತೆ ಬದಿಯ ಮನೆಯ ಬೇಲಿಯಲ್ಲಿನ ಹಸಿರನ್ನು ತಿನ್ನಲು ನುಗ್ಗಿ ಮನೆಯವರ ಬೈಗುಳಕ್ಕೆ ತುತ್ತಾಗುತ್ತಿದ್ದವು. ಕೊಂಚ ದೂರದಲ್ಲಿ ಬೇಲಿಗೆ ನುಗ್ಗಿದ ದನಗಳನ್ನು ಒಣ ರೆಂಬೆಯನ್ನು ಹಿಡಿದು ಓಡಿಸಲು ಮಹಿಳೆಯೊಬ್ಬಳು ಗದರಿಸುವ ಕೆಲಸದಲ್ಲಿ ತೊಡಗಿದ್ದಳು. ಈ ನಡುವೆ ಕೊಬ್ಬಿದ ಹೋರಿಯೊಂದು ಪಿತ್ತ ನೆತ್ತಿಗೇರಿದಂತೆ, ಮಿಲನಕ್ಕಾಗಿ ಹಸುವೊಂದರ ಮೇಲೇರುವ ಕಾದಾಟದಲ್ಲಿ ಆ ರಸ್ತೆಯಲ್ಲಿ ಅಸ್ತವ್ಯಸ್ತತೆಯನ್ನು ಸೃಷ್ಟಿಸಿತ್ತು.
ಅನಿಲ್ ತನ್ನ ಹೆಜ್ಜೆಗಳನ್ನು ನಿಯಂತ್ರಿಸಿ ನಿಧಾನಿಸಿದ. ಸದಾ ನಗುವುದನ್ನೇ ಮರೆತಂತಿದ್ದ ಜಿನಸು ಅಂಗಡಿಯ ಚಂದ್ರೇಗೌಡರ ಮನೆಯೆದುರು ಬಂದಾಗ, ಮೂರು ರಸ್ತೆ ಕೂಡುವಲ್ಲಿರುವ ಗಣಪತಿ ಆಚಾರ್ರ ಮನೆಯ ಮುಂದಿನ ಬಿದಿರಿನ ಮೆಳೆಯ ಮರೆಯಲ್ಲಿ ಸೂರ್ಯ ಕಂತುತ್ತಾ ಬಾನೆಲ್ಲಾ ಚಿತ್ತಾರವನ್ನೇ ಸೃಜಿಸಿದ್ದ. ಚಿತ್ತಾರವೆದ್ದ ಬಾನಿನಲ್ಲಿ ಅಡ್ಡ ಹಾದು, ಜೋಲಿ ಹೊಡೆಯುತ್ತಾ ಗೂಡಿಗೆ ತೆರಳುವ ಹಕ್ಕಿಗಳು ಹಾಗೂ ತಮ್ಮ ದಿನದ ದುಡಿಮೆಯನ್ನು ಗೂಡಿನಲ್ಲಿಟ್ಟು ಬಾನಿನಲ್ಲಿ ನತರ್ಿಸುತ್ತಾ ಈ ಕಲಾಕೃತಿಯ ಕಲಾಕಾರರು ತಾವೆಂಬಂತೆ ಗರ್ವದಲ್ಲಿ ರೆಕ್ಕೆ ಬಡಿದು, ಚಿಲಿಪಿಲಿ ಧ್ವನಿಯಲ್ಲಿ ಹೇಳುತ್ತಿರುವ ಹಾಗಿರುವ ಆ ಕéಣದ ದೃಶ್ಯ- ಪರಿಸರ ಸೃಷ್ಟಿಸಿದ ಅಪೂರ್ವ ಕಲಾಕೃತಿಯಂತೆ ಕಾಣಿಸುತ್ತಿತ್ತು ಅವನಿಗೆ.


       ಅವನು ಇಂತಹ ಹಲವು ಸಂಜೆಗಳನ್ನು ಈ ಊರಿನಲ್ಲಿ ಕಳೆದಿದ್ದಾನೆ. ಇದು ಅವನಿಗೆ ಹೊಸತಲ್ಲ. ಮತ್ತು ಅವನು ಇಲ್ಲಿಯ ಕೊನೆಯ ಸಂಜೆಯನ್ನು ಕಳೆದಿದ್ದು ಎಂಟು ವರುಷಗಳ ಹಿಂದೆ. ಅದೀಗ ಅವನಿಗೆ ನೆನಪಾಗುತ್ತಿದೆ. ಆದರೆ ಈ ನೆನಪುಗಳು ಅವನ ಮನಸನ್ನು ಆವರಿಸಿದವೆ ಹೊರತು. ಮುದಗೊಳಿಸಲಿಲ್ಲ. ಈ ಮಣ್ಣಿನಲ್ಲಿ ಕಳೆದಿದ್ದು, ಬಿದಿರಿನ ಮೆಳೆಯಲ್ಲಿ ಬದಿಯ ನೇರಳೆ ಮರದಲ್ಲಿ ಮರ-ಕೋತಿ ಆಟವಾಡಿದ್ದು, ಕಬ್ಬಡ್ಡಿ ಆಡುವಾಗ ಸಕೀನಾಳನ್ನು ತಬ್ಬಿ ಹಿಡಿದಿದ್ದು, ಗೆಳೆಯರ ಸಂಗಡ ಬೇಬಿ ಸಾಹುಕಾರರ ತೋಟಕ್ಕೆ ನುಗ್ಗಿದ್ದು, ಹಕ್ಕಿಪಕ್ಕಿಗಳ ಕಲರವಕ್ಕೆ ಕಿವಿಯಾಗಿದ್ದು ರೋಮಾಂಚನಗೊಳಿಸುವ ನೆನಪುಗಳಾಗಿ ಅವನನ್ನು ಕಾಡಿಸುತ್ತಿದ್ದಿದ್ದು ಇಂದು ಮೌನ ತಾಳಿದೆ. ಈ ಮೌನ ಕದಡಿಸುವಂತೆ ಹಿಂದಿನ ನೆನಪಿನಲ್ಲಿ ಮಾತನಾಡಿಸುವ ಹಿರಿಯರ ಮಾತುಕತೆಯಲ್ಲಿ ದಾರಿಯುದ್ದಕ್ಕೂ ಹತ್ತು ಹೆಜ್ಜೆಗೊಂದು ಬಾರಿ ನಿಂತು ಎಲ್ಲೂ ಕೃತಕ ಮಾತುಗಳಾಗದಂತೆ ಎಚ್ಚರವಹಿಸುತ್ತಾ ಮಾತುಕತೆ ಮುಗಿಸಿ ನಡೆಯುವಾಗ, ಪೂರ್ವದಲ್ಲಿ, ಸಂಜೆ ಸೂರ್ಯ ಬಿದಿರಿನ ಮೆಳೆಯ ಹಿಂದೆ ಕಂತಿದ ಮೇಲೆ ಬೀಸಿ ಬರುವ ಗಾಳಿಗೆ ಬಿದಿರುಗಳು ಓಲಾಡುತ್ತಾ ಒಂದಕ್ಕೊಂದು ಘಷರ್ಿಸಿ ಕಟಕಟನೆ ಸದ್ದನ್ನು ಸೃಷ್ಟಿಸುತ್ತಾ ಮುಳುಗಿದ ರವಿಯನ್ನು ಮರೆತು ಕತ್ತಲಿನೊಡನೆ ಸಂವಾದ ನಡೆಸಲು ಯತ್ನಿಸುತ್ತಿತ್ತು. ನಿಶೆಯು ಮೆಲ್ಲಮೆಲ್ಲನೆ ಆತುರಕ್ಕಿಳಿ0ುದೆ ಭುವಿಯನ್ನು ಬಾಹುವಿನೊಳಕ್ಕೆ ಸೇರಿಸಿಕೊಂಡು ನಶೆಯೇರಿಸಿಕೊಳ್ಳುತ್ತಿತ್ತು. ಅವನಿಗೆ ಈಗ ಆ ದಾರಿಯಲ್ಲಿ ನೇರವಾಗಿ ನಡೆದುಕೊಂಡು ಖಾಂಡ್ಯದತ್ತ ಹೋಗುವ ಮನಸ್ಸಾಯಿತು.


ಮಂಗಳೂರಿನಲ್ಲಿದ್ದರೆ ಎಂ.ಜಿ. ರೋಡಿನಲ್ಲೋ, ಸ್ಟೇಟ್ ಬ್ಯಾಂಕ್ನ ಪುರಭವನದ ಮುಂದಿನಲ್ಲೋ ಅಥವಾ ಲಾಲ್ಭಾಗ್ನ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಎದುರಿರುವ ಬಿಗ್ ಬಜಾರ್ ಮುಂದಿನ ಜನಸಾಗರಕ್ಕೆ ವಾಹನ ದಟ್ಟಣೆಗೆ ಬೈಯುತ್ತಾ, ಬಸ್ಸಿಗಾಗಿ ಓಡಿ ಬರುವಾಗ ನಿನ್ನ ಪಯಣ ಇದರಲ್ಲಿ ಬೇಡವೆಂದು ತನ್ನನ್ನು ಬಿಟ್ಟು ಹೊರಟು ಹೋದ 15 ನಂಬರಿನ ಬಸ್ಸನ್ನು ಶಪಿಸುತ್ತಾ ಸಮಯವನ್ನೇ ಹಿಂದೆ ಹಾಕುವಂತಿದ್ದವನಿಗೆ ಬೀಸು ನಡಿಗೆ ಮರೆತು ಹೋಗಿ, ಪುಟ್ಟ ಮಗುವೊಂದು ಕಳೆದುಕೊಂಡ ತನ್ನಿಷ್ಟವಾದ ವಸ್ತುವನ್ನು ಅತೀ ಸೂಕ್ಷ್ಮವಾಗಿ ಹುಡುಕುವಂತೆ ಅವನ ಕಣ್ಣುಗಳು ಕಡಲ ಬದಿಯ ದೀಪ ಸ್ತಂಬದ ಬೆಳಕಿನ ಕೋಲಿನಂತೆ ಪ್ರತೀ ಹೆಜ್ಜೆಯೊಂದಿಗೆ ಅತ್ತಿತ್ತ ಎಲ್ಲಾ ಕೋನಗಳಿಗು ಸುತ್ತುತ್ತಿತ್ತು.


             ಅಂಕುಡೊಂಕಾದ ರಸ್ತೆಯಲ್ಲಿ ಜನರ ಓಡಾಟ ಜಾಸ್ತಿಯಿರಲಿಲ್ಲ. ಕೆಲವರು ದಿನದ ವಹಿವಾಟುಗಳನ್ನು ಮುಗಿಸಿ, ಹೊಳೆದಾಟಿ ಹೋಗಬೇಕಾದ ಮಾಗ್ಲಕ್ಕೋ, ಸೇತುವೆ ಮೇಲಿನಿಂದ ಸಾಗಿ ಪಾರೆಸ್ಟ್ ಗೇಟ್ ದಾಟಿ ಹೂಗಬೇಕಾದ ಖಾಂಡ್ಯಕ್ಕೋ, ಇನ್ನು ಕೆಲವರು ಗದ್ದೆಯ ಬದುವಿನಲ್ಲಿ ನಡೆದು ಗದ್ದೆ ದಾಟಿ ಮಸಿಗದ್ದೆಗೆ ಹೋಗಬೇಕಾದವರು ಬೇಗ ಮನೆ ತಲುಪುವ ಹಂಬಲದಲ್ಲಿ ಇಳಿಜಾರಾದ ರಸ್ತೆಯನ್ನು ಇಳಿಯುತ್ತಿದ್ದರೆ, ಕೆಲವರು ದಿನಸಿ ಅಂಗಡಿಯನ್ನು ಲೆಕ್ಕ ಮಾತ್ರಕ್ಕಿಟ್ಟು ಕದ್ದು, ಮುಚ್ಚಿ ರಮ್ಮು, ವಿಸ್ಕಿ ಮಾರುವ, ಇಸ್ಪೀಟ್ ಕ್ಲಬ್ಬನ್ನು ಅಂಗಡಿಯೊಳಗೇನೇ ನಡೆಸುವ ಜನ್ನಿ ಪಬರ್ುವಿನ ಅಂಗಡಿಯು ಹೇಳಹೆಸರಲ್ಲದಂತೆ ಮಾಯವಾದ ಮೇಲೆ ಪರವಾನಿಗೆ ಸಹಿತ ಮತ್ತು ರಹಿತ ಎದ್ದು ನಿಂತ ಬಾರು, ಹೋಟೆಲ್, ಗಡಂಗುಗಳಿಗೆ ಕಾಲು ಹಾಕುತ್ತಿದ್ದರು. ಒಂದು ಕಾಲದಲ್ಲಿ ಈ ಊರಿಗೆ ಪರವಾನಿಗೆ ಪಡೆದ ಶರಾಬು ಅಂಗಡಿಯಾಗಲೀ, ವೈನ್ಶಾಪ್ ಆಗಲೀ ಇಲ್ಲದಿದ್ದಾಗ ಈ ಅನುಪಸ್ಥಿತಿಯನ್ನು ಜನ್ನು ಪಬರ್ುವಿನ ಅಂಗಡಿ ಹಾಗೂ ಬಿದಿರಿನ ಮೆಳೆಯಲ್ಲಿ ಕದ್ದು ಮುಚ್ಚಿ ಬೇಯಿಸುವ ಕಂಟ್ರಿ ಸರಾಯಿ ಭತರ್ಿ ಮಾಡಲು ಶಕ್ತವಾಗಿದ್ದವು. ಈಗ ತಾನು ಹುಟ್ಟಿಸಿದ ಕುಡಿತದ ನಶೆಯ ಮತ್ತು ರಮ್ಮಿ ಆಟದ ಲೋಕದಿಂದ ಮಂಕಾದವನಂತೆ ಜನ್ನಿ ಪಬರ್ು ಅಚಾನಕ್ಕಾಗಿ ಮರೆಯಾಗಿದ್ದಾನೆ. ಅವನ ಲೋಕದ ನಶೆ ಕುಡಿದವರು ಕೂಡಾ ಅವನ ಲೋಕವನ್ನು ಮರೆಯಲಾಗದೆ ಪೇಟೆಯಲ್ಲಿ ಒದ್ದಾಡುತ್ತಿರುವಂತೆ ಹಳೆತಲೆಗಳು ಅತ್ತಿತ್ತ ಓಡಾಡುವುದನ್ನು ನೋಡಿದ್ದಾನೆ. ಅವನ ಲೋಕದಲ್ಲಿ ಜೀವ ಪಡೆಯುತ್ತಿದ್ದ, ಸುಯ್ಯತ್ತಿದ್ದ, ಮೆರೆಯುತ್ತಿದ್ದ ಜೀವಗಳು ಒಂದೊಂದಾಗಿ ಈ ಲೋಕದಿಂದ ಕಾಣೆಯಾದ ಮೇಲೆ ಆ ಲೋಕ ಬಣ್ಣ ಕಳೆದು ಕೊಳ್ಳುವ ಹೊತ್ತಿಗೆ ಜನ್ನಿ ಪಬರ್ು ಕೂಡಾ ಮರೆಯಾದುದರಿಂದ ರಾತ್ರಿಯಿಡೀ ಅದರಲ್ಲಿ ಮುಳುಗುತ್ತಿದ್ದ ಜೀವಗಳು ವಿಹ್ವಲವಾದಂತಿವೆ.

 

ಸರಿ ಸುಮಾರು ಎಂಟು ವರುಷಗಳು ಕಳೆದಿರಬಹುದು – ಅನಿರುದ್ಧ್ ಊರಿಗೆ ಬರದೆ. ಇಷ್ಟು ದೀರ್ಘ ಕಾಲದ ನಂತರ ಹಿಂತಿರುಗಿ ಬಂದವನಿಗೆ ಈಗ ಈ ಊರನ್ನು ಮರಳಿ ತನ್ನ ಕಣ್ಣಲ್ಲಿ ಹೊರಬೇಕೆಂಬ ಹಂಬಲ. ಅದಕ್ಕಾಗಿ ಮರಳುಗಾಡಿನ ವಾಸಿಯೊಬ್ಬ, ನೀರ ಸೆಲೆಯಿರುವ ಊರಿನಲ್ಲಿ ಎಲ್ಲವನ್ನೂ ತಣಿಸಿಕೊಳ್ಳು ಹಾತೊರೆದಂತೆ ಬೆಳಗ್ಗಿನಿಂದಲೂ ಒಂದೇ ಸವನೆ ನಾಲ್ದೆಸೆಗೂ ತಿರುಗಿದ್ದ. ಬಾಲ್ಯದಲ್ಲಿ ಸುತ್ತಾಡಿದ ಸುಣ್ಣದ ಗೂಡು; ಸುಣ್ಣ; ಕಪ್ಪೆ ಚಿಪ್ಪು; ಅದನ್ನು ಬೇಯಿಸುವ ಬಾಯ್ಲರ್; ಭದ್ರೆಯ ಹರಿವ ನೀರಿನ ಜುಳು ಜುಳು ಸದ್ದು; ನೀರಿನೊಳಗೆ ಮಲಗಿ ವಿಶ್ರಾಂತವಾಗಿರುವ ನಾನಾ ಆಕಾರದ ಕಲ್ಲುಗಳು; ಪಾಚಿ ಕಟ್ಟಿದ ಕಲ್ಲುಗಳು; ಭದ್ರೆಯ ತಟ; ಅದರ ಪಕ್ಕದ್ದಲ್ಲಿ ನಿಂತ ಪೊದೆಗಳು, ಬಿದಿರಿನ ಮೆಳೆ, ಒಂದನ್ನು ಬಿಡದೆ ಇವೆಲ್ಲವೂ ತನ್ನ ಪ್ರಪಂಚದ ನಾನಾ ಲೋಕಗಳು ಎಂಬಂತೆ ನೋಡಿ ಬಂದಿದ್ದ. ದಿನವಿಡೀ ಊರು-ಜನರನ್ನು ಕಂಡವನಿಗೆ, ಅದರಲ್ಲೂ ಹಮೀದ್ ಕಾಕನ ಮಾತು ಕೇಳಿದ ಮೇಲೆ ಈ ಊರು ಹಿಂದೆ ಹೀಗಿರಲಿಲ್ಲ ಇಂದೇಕೆ ಹೀಗಾಯಿತು ಪ್ರಶ್ನೆಗಳು ಅವನ ತಲೆಯೊಳಗೆ ಮೊಳಕೆಯೊಡೆದಿದ್ದವು.


ಉರುಳಿಬಿದ್ದ ಕಾಲಕ್ಕೆ ಬದಲಾದ ಊರಿಗೆ ಭಿನ್ನ ವಿಚಾರಗಳೊಂದಿಗೆ ಬಂದವನಿಗೆ ಊರೇ ವಿಭಿನ್ನವಾಗಿ ಕಾಣಿಸತೊಡಗಿತು. ಈಗಿಲ್ಲಿ – ಜನರ ಬದುಕಿನಲ್ಲಾದ ಸ್ಥಿತ್ಯಂತರ, ಮನೋಭಾವಗಳಲ್ಲಾದ ಪಲ್ಲಟಗಳ ಗ್ರಹಿಕೆಯಾದ ಕ್ಷಣದಿಂದ, ಎಲ್ಲಾ ಕಳೆದುಕೊಂಡು ನಿರ್ಗತಿಕನಾಗಿ ಅಪರಿಚಿತ ಊರಿನಲ್ಲಿ ನಿಂತವನಂತಾಗಿತ್ತವನ ಪಾಡು. ಊರಿನ ರೂಪುರೇಷೆ, ಹಳೆೆಜನರ ಮುಖ, ಹೊಸಜೀವ ಪಡೆದ ಹಳೇಮನೆಗಳು, ಬೀದಿಗಳು, ಹೊಳೆ ಅದನ್ನು ಬಿಟ್ಟರೆ ಮತ್ತೆಲ್ಲವೂ ಅಪರಿಚಿವಾಗಿತ್ತು.


ಪ್ರಜ್ಞಾವಲಯದ ಪರಿಧಿಯಲ್ಲಿ ಇದ್ದು ಇರದಂತೆ ನಡೆಯುತ್ತಿದ್ದವನ ಮನಸ್ಸು ಇಕ್ಬಾಲ್ ಕಾಕನ ಮನೆಯಂಗಳ ಕಾಣುತ್ತಿದ್ದಂತೆ ಅನೂಹ್ಯವಾಗಿ ಬಲಭಾಗಕ್ಕೆ ಕಣ್ಣನ್ನು ಹೊರಳಿಸುವಂತೆ ಮಾಡಿತು- ನೆನಪಿನ ತಂತು. ಕಣ್ಣಿಗೆ ಕಂಡದ್ದನ್ನು ಕಂಡು ಉದ್ವೇಗಗೊಂಡ. ತನಗರಿವಿಲ್ಲದಂತೆ ಕಾಲುಗಳತ್ತ ಚಲಿಸಿದವು. ಹಿಂದಿನದ್ದೇ ರೂಪು. ಆದರೆ, ಮೈ ಮೇಲಿನ ಸಿಮೆಂಟ್ ಗಾರೆಗಳು ಕಳಚಿ ಬಿದ್ದು ಅಲ್ಲಲ್ಲಿ ಗುಳಿಗಳು ಕತ್ತಲಲ್ಲಿ ಕೈಯಾಡಿಸಿದವನ ಸ್ಪರ್ಶಕ್ಕೆ ಉತ್ತರವಾಯಿತು. ಊರೆಲ್ಲಾ ಅಸಮಾಧಾನದ ನಿಶ್ಯಬ್ದತೆಯನ್ನು ಹೊತ್ತಿದ್ದ ಸಮಯ ಜನರು ಸಂಜೆ-ಕತ್ತಲ ವ್ಯವಹಾರದಲ್ಲಿ ಮುಳುಗಿದ್ದರು. ಬಾವಿ ಮಾತ್ರ ಕತ್ತಲಲ್ಲಿ ದಿನಚರಿ ಸ್ಥಗಿತಗೊಂಡಂತೆ ನಿಂತಿತ್ತು. ಸಿಮೆಂಟಿನ ಗಾರೆಯನ್ನೊಡೆದು ಬಾವಿಯೊಳಗಿಂದ ಮೂಡಿದ ಅಶ್ವತ್ಥದ ಗಿಡವೊಂದು ಸುಯ್ಯುವ ಗಾಳಿಯಲ್ಲಿ ತಲೆ ತೂಗುತ್ತಿತ್ತು. ಬದಿಯಲ್ಲಿ ಆಳೆತ್ತರಕ್ಕೆ ಬೆಳೆದಿದ್ದ, ಶತಮಾನ ಬಾಳಿದ್ದ ಅಶ್ವತ್ಥ ಎಂದೋ ಶವವಾದುದರ ಸೂಚಕವಾಗಿ ಒಣ ಬೊಡ್ಡೆಯೊಂದು ಕತ್ತಲಲ್ಲೂ ಅವನ ಕಣ್ಣಿನ ಬಿಂಬದೊಳಗೆ ಪ್ರವೇಶ ಪಡೆದುಕೊಂಡಿತು.


ಊರವರಿಗೆ ಈ ಬಾವಿಕಟ್ಟೆ ಕುಡಿಯುವ ನೀರಿಗಷ್ಟೇ ಸೀಮಿತವಾಗಿದ್ದರೆ, ಅವನಿಗೆ ಕನಸುಗಳ ಉಗಮಿಸುತ್ತಿದ್ದ; ಕುತೂಹಲ ತಣಿಕೆಯಾಗುತ್ತಿದ ಸ್ಥಳ. ಈಗವನಿಗೆ ಉಸ್ಮಾನಿನ ನೆನಪಾಯಿತು. ಅವನ ಒಡನಾಟದೊಡನೆ ಸಂಜೆಗಳು ರಂಗೇರುತ್ತಾ ರಾತ್ರಿಯಾಗುತ್ತಿದ್ದುದು ಕಾಡಿತು. ಅವರ ನಡುವಿನಲ್ಲಿ ಊರ ವಿಚಾರ, ಪ್ರೀತಿ-ಪ್ರೇಮ, ಭವಿಷ್ಯಗಳೆಲ್ಲಾ ಚಚರ್ಿತವಾಗುತ್ತಿದ್ದುದು ಈ ಬಾವಿಕಟ್ಟೆಯಲ್ಲಿ0ೆು. ಉಸ್ಮಾನ್, ಆಗ, ಶಾಲೆಯನ್ನು ಬಿಟ್ಟು ಕಾಲಗಳಾಗಿ, ಟಿಂಬರ್ ವ್ಯವಹಾರದಲ್ಲಿ ನಿರತನಾಗಿದ್ದ ಅಹಮದ್ನೊಡನೆ ಕಪ್ಪಾದ ಲುಂಗಿ, ಹಳೆಅಂಗಿ ತೊಟ್ಟು ಬೆಳಗಾದ ತಕéಣ ಬೈರಾಸು ಸೊಂಟಕ್ಕೆ ಸುತ್ತಿಕೊಂಡ, ಟಿಂಬರ್ ಎಳೆಯುವ ಕೆಲಸಗಾರನಾಗಿದ್ದ. ಅಹಮದ್ನ ಮನೆಯೆದುರು ಹಾಜರಾಗುತ್ತಿದ್ದ. ಮತ್ತು ಆಗಷ್ಟೇ ಶಾಲೆಗೆ ಹೊರಡಲು ಅವಸರವಿಲ್ಲದೆ ಇದೊಂದು ಅನಗತ್ಯ ದಿನಚರಿಯೆಂಬಂತೆ ಹೊರಡುತ್ತಿದ್ದ ಅಹಮದ್ನ ಮಗಳು ಸಕೀನಾಳಲ್ಲಿ ತೀವ್ರ ಆಸಕ್ತಿ ಕುದುರಿಸಿಕೊಂಡು , ಬ್ಯಾರಿ ಭಾಷೆಯಲ್ಲಿ ತಮಾಷೆ ಮಾಡುತ್ತಾ, ಅವಳು ಕೊಟ್ಟ ಕಾಫಿಯನ್ನು ಕುಡಿಯುತ್ತಾ, ಲಾರಿಯನ್ನು ಕಾಯುತ್ತಿದ್ದ. ಅವನ ತಮಾಷೆಚಿು ಮಾತಿಗೆ “ಪೋಲಾ ಅಂಡೆ ಪಿಕರ್ಿ” ಎಂದು ಅವನನ್ನು ಬೈದು ತನ್ನ ಕೆಲಸದಲ್ಲಿ ನಿರತಳಾಗುತ್ತಿದ್ದಳು. ಹಾರನ್ ಹಾಕುತ್ತಾ ಲಾರಿ ಬಂದು ನಿಂತಾಗ ಅವಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಟಿಂಬರ್ ಎಳೆಯುವ ರೋಪನ್ನು ಎತ್ತಿ ಲಾರಿಗೆ ಹಾಕಿ ಬೇರೆಯವರೆಲ್ಲಾ ಹತ್ತಿದ ಮೇಲೆ ತಾನು ಹತ್ತಿ ರೈಟ್ ರೈಟ್ ಎಂದು ಕೂಗುವ ಅವನ ಕೂಗು ಸುತ್ತಲಿನ ಮನೆಯನ್ನು ತಲುಪಿ ಸಕೀನಾಳನ್ನು ತಲುಪುವಾಗ ತನ್ನ ಆಜ್ಞೆಯಿಂದ ಲಾರಿ ಚಲಿಸುತ್ತಿದೆ ಎನ್ನುವಂತೆ ಉತ್ಸಾಹಿತನಾಗುತ್ತಿದ್ದ. ಜೊತೆಗೆ ತಾನು ಹೊರಟಿದ್ದೇನೆನ್ನುವುದು ತನ್ನ ಕೂಗಿನಿಂದ ಸಕೀನಾಳ ಹೃದಯ ತನ್ನಲ್ಲಿ ಆಸಕ್ತವಾಗಿ ಕಣ್ಣುಗಳು ತನ್ನನ್ನು ನೋಡಲಿಯೆಂದು ಬಯಸುತ್ತಿದ್ದ. ಅವಳು ಮಾತ್ರ ‘ಪಿರಾಂದ’ ಎಂದು ಹೆಗಲ ಮೇಲಿನ ಶಾಲನ್ನು ಸರಿಪಡಿಸುತ್ತಾ ಅವಳ ಕೆಲಸದಲ್ಲಿ ವ್ಯಸ್ತಳಾಗುತ್ತಿದ್ದಳು.

ಕಡವಂತಿ, ಬಸಾಪುರ ಅಥವಾ ಉಜ್ಜಯಿನಿಯ ಟಿಂಬರ್ ಕೆಲಸಕ್ಕೆ ಹೋದವನು, ಸಂಜೆ ಹೊರಲಾಗದ ಭಾರವೆಂಬಂತೆ ತುಂಡರಿಸಿದ ಮರಗಳನ್ನು ತುಂಬಿಕೊಂಡು ಎದುಸಿರು ಬಿಡುವಂತೆ ಬರುವ ಲಾರಿಯಿಂದ ಇಳಿದು, ಮೈಯೆಲ್ಲಾ ಮಣ್ಣು; ಮಣ್ಣಿನ ವಾಸನೆಯನ್ನು, ಬೆವರಿನ ವಾಸನೆಯನ್ನು ಹೊತ್ತುಕೊಂಡು ಕೆಲಸದ ಸಾಮಾನುಗಳನ್ನು ಅಹಮದ್ನ ಮನೆಯಲ್ಲಿ ಇಡುವ ನೆಪದಲ್ಲಿ ಸಕೀನಾಳನ್ನು ರಾತ್ರಿಯ ಸ್ವಪ್ನಕ್ಕಾಗಿ ಮನಸ್ಸಿನಲ್ಲಿ ತುಂಬಿಕೊಳ್ಳುತ್ತಿದ್ದ. ದಾರಿಯಲ್ಲಿ ಅವನ ಇಷದ ‘ಗೋರಾ ಕಾಗಜ್ ಕಾ ಮನ್ ಹೇ ಮೇರಾ ಲಿಕ್ ದಿಯಾ ನಾಮ್ ಹೇ ತೇರಾ’ ಎಂದು ಹಾಡುತ್ತಾ ಮನೆ ತಲುಪುವಾಗ ಅವನ ಉಮ್ಮಾ ಮಾಡಿಡುತ್ತಿದ್ದ ಬಿಸಿ ನೀರಿನಲ್ಲಿ ಸ್ನಾನ ಮುಗಿಸಿ, ಪ್ಯಾರಾಶ್ಯೂಟ್ ತೆಂಗಿನ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿ ಅದರ ಪರಿಮಳವನ್ನು ಸೂಸುತ್ತಾ. ಸಂಜೆ ಕತ್ತಲಿಗೆ ತಿರುಗುವ ಹೊತ್ತಿನಲ್ಲಿ ಗೋಧಿ ಮೈದಾನದಲ್ಲಿ ಆಡುವ ಕ್ರಿಕೆಟ್ ಆಟ ನೋಡುತ್ತಾ ಕೂತಿರುತ್ತಿದ್ದ. ಜನರಿದ್ದಾಗ ಎಕ್ಸಟ್ರಾ ಪ್ಲೇಯರ್ ಆಗಿರುತ್ತಿದ್ದವನು, ಆಟದನಂತರ ರೋಹಿತನನ್ನು ಸೇರಿಕೊಂಡರೆ ಮನೆಕಡೆ ಹೊರಳುತಿದ್ದುದು ರಾತ್ರಿ0ೆು.
ಅಸಂಖ್ಯಾತ ನಕ್ಷತ್ರಗಳನ್ನು, ಚಂದ್ರನಿಲ್ಲದಿದ್ದರೂ ಬೆಳಕ ಮೂಡಿಸುವ ಪರಿಗೆ ಬೆರಗಾಗುತ್ತಾ, ದೂರದಲ್ಲಿ ಕಾಣುವ ಚಂದ್ರಗಿರಿಯ ಬೆಟ್ಟದ ತುದಿಯ ನೆತ್ತಿಯಲ್ಲಿ ಯಾರೋ ಗಾಳಿಪಟವನ್ನು ಉಡಾಯಿಸಿದಂತೆ ಕಾಣುವ ಬಾನನ್ನು ನೋಡುತ್ತಾ ನಿಂತವನು ಉಸ್ಮಾನಿನ ಬಗ್ಗೆ 0ೋಚಿಸತೊಡಗಿದ.


ಅನಿರೀಕ್ಷಿತವಾಗಿ ಮಂಗಳೂರಿನ ಬಂದರಿನ ಗಿಜಿಗಿಡುವ ರಸ್ತೆಯಲ್ಲೋ ಅಥವಾ ಬಜ್ಪೆಯ ಏರ್ಪೋಟರ್್ ರಸ್ತೆಯಲ್ಲೋ, ಸುರತ್ಕಲ್ನ ಸದಾನಂದ್ ಹೋಟೆಲ್ನ ಮುಂಭಾಗದಲ್ಲಿ ಎದುರಾದವನು ಗಡಿಬಿಡಿಯಲ್ಲಿ ಅವನನ್ನು ವಿಚಾರಿಸುವುದಕ್ಕಿಂತ ಹೆಚ್ಚಾಗಿ ಅವನ ಮನೆಯವರನ್ನು ವಿಚಾರಿಸಿ ಗಾಳಿಯಷ್ಟೇ ವೇಗವಾಗಿ ಮರೆಯಾಗುತ್ತಿದ್ದ. ಕೆಲವೊಮ್ಮೆ ಅವನ ವರ್ತನೆ ವಿಚಿತ್ರವಾಗಿ ಕಂಡು, ಅವನ ಅಲೆಮಾರಿ ಬದುಕಿನ ಬಗ್ಗೆ ಕರುಣೆ ಹುಟ್ಟುತಿತ್ತು. ಹಾಗೂ ಇವನು ಯಾಕೆ ಈ ರೀತಿ ಊರೂರು ಸುತ್ತುತ್ತಾನೆ ?ಎಂಬ ಪ್ರಶ್ನೆ ಅವನನ್ನು ಬಹಳ ಸಲ ಕಾಡಿದೆ .ಕಡಬಗೆರೆಯಲ್ಲಿದ್ದರೆ ಕಾಂಟ್ರಾಕ್ಟ್ ಕೆಲಸದವರ ಜೊತೆ, ಅದಿಲ್ಲದಿದ್ದದ್ದರೆ, ಟಿಂಬರ್ ಕೆಲಸ ಅಲ್ಲದಿದ್ದರೆ ಬೇಬಿ ಸಾಹುಕಾರರ ತೋಟದಲ್ಲಿ ಸೊಂಟಕ್ಕೆ ಗೋಣಿ ಚೀಲ ಕಟ್ಟಿಕೊಂಡು ಕಾಫಿ ಕೊಯ್ಯತ್ತಿದ್ದವನು ಈ ಮಂಗಳೂರು ನಗರದಾಚೆಯಿರುವ ಸಣ್ಣ ಸಣ್ಣ ನಗರಗಳಲ್ಲಿ ಅದೇನೂ ಮಾಡುತ್ತಾನೆ? ಅದೇನು ಗಂಟು ಇದೆ ಅಥವಾ ಅದೇನು ಇಲ್ಲಿ ಇಟ್ಟಿದ್ದಾನೆ ಎಂಬ ಆಶ್ಚರ್ಯ ಅನಿರುದ್ಧ್ಗೆ ಪ್ರಶ್ನೆಯಾಗಿ ಕಾಡಿದನ್ನು ಪ್ರಶ್ನೆಯಾಗಲು ಉಸ್ಮಾನ್ ಅವಕಾಶವನ್ನು ಕೊಡುತ್ತಿರಲಿಲ್ಲ.


ಈ ಊರಿಗೆ ಕಾಲಿಟ್ಟ ಕ್ಷಣ ಅನಿರುದ್ಧ್ಗೆ ನೆನಪಾಗಿದ್ದು ಕಾಡಿನಿಂದ ನೆಲ್ಲಿಕಾಯಿ ತಂದು ಕೊಡುತ್ತಿದ್ದ; ಅಪರೂಪಕ್ಕೆ ಅವನ ಅಪ್ಪನ ಜಾಗದಲ್ಲಿ ಮೀನು ಮಾರಲು ಕುಳಿತರೆ ಆಚೀಚೆ ನೋಡಿ ಒಂದು ಬಂಗುಡೆಯನ್ನು ಹೆಚ್ಚಿಗೆ ಹಾಕುತ್ತಿದ್ದವನು. ಮರ ಹತ್ತಿ ಹಕ್ಕಿ ಗೂಡನ್ನು ತೋರಿಸುತ್ತಾ ಜಗವನ್ನು ತೋರಿಸುವ ಸಂಭ್ರಮಿಕೆಯಲ್ಲಿರುತ್ತಿದ್ದವನು. ಮತ್ತು ಕಾಡಿಗೆ ಕರೆದೊಯ್ದು ಕಾಡು ಕೋಳಿಗಳಿಗೆ ಬಲೆ ಹೂಡುತ್ತಿದ್ದವನು. ಅವನನ್ನು ಹುಡುಕುತ್ತಾ ಮನೆಯತ್ತ ನಡೆಯುತ್ತಿದ್ದವನಿಗೆ ಸಿಕ್ಕಿದ ಹಮೀದ್ ಕಾಕನ ಮಾತುಗಳು ಊರಿನ ಬಗೆಗಿದ್ದ ಹಿಂದಿನ ಕಲ್ಪನೆಗಳು ಕಳಚಿಬಿದ್ದವು.


ಬೆಳಗ್ಗ್ಲೆ ನಡೆದ ಸಂವಾದವನ್ನು ಅವನು ತಕ್ಷಣ ಮರೆ0ುಲಾರ. ಈಗಲೂ ಅವನ ಚಿತ್ತದಲ್ಲಿ ಅದೇ ವಿಹರಿಸುತ್ತಿದೆ. ಈಗವನಿಗೆ, ಉಸ್ಮಾನ ಉಸ್ಮರುತ್ತಿದ್ದ – ‘ಗುಡ್ಡಕ್ಕೆ ಬೆಂಕಿ ಬಿದ್ದಿತು,……. ಓಡಿ………’ ಎನ್ನುವ ಹಾಡು ಸತ್ಯವೆಂದೆನಿಸಿತು . ಗುಡ್ಡಕ್ಕೆ ಬೆಂಕಿ ಬಿದ್ದದ್ದು ಹೌದು. ಅದು ಬರೀ ಬೆಂಕಿಯಲ್ಲ. ವಿಷಾಗ್ನಿ ಯಾರನ್ನೂ ಬಿಡದೆ ಸುಡುವಂತದ್ದು. ಹಮೀದ್ ಕಾಕಾ ಸೀದಾ ಸಾದಾ ವ್ಯಕ್ತಿ ಅನಿರುದ್ಧ್ನ ಅಪ್ಪನ ಖಾಸಾ ದೋಸ್ತ್. ಸದಾ ಮೌನವಾಗಿರುವ ನಗುವನ್ನು ಮಾತ್ರ ಸುಳಿಸುವ ಹಮೀದ್ ಕಾಕಾ ಯಾವುದೇ ಮುಲಾಜಿಲ್ಲದೆ ಹೀಗೆ ಹೇಳುವ ಸ್ವತಂತ್ರವನ್ನು ಅವನ ಅಪ್ಪನೊಡನಿದ್ದ ಸಂಬಂಧದಿಂದ ಪಡೆದುಕೊಂಡಿದ್ದರು. ಅವನ ಅಪ್ಪ ಹೋದರೂ ಸಲಿಗೆ ಹಮೀದ್ ಕಾಕಾ ಹಾಗೆ ಉಳಿಸಿಕೊಂಡಂತೆ ಎಲ್ಲವನು ನೇರವಾಗಿ ನುಡಿದಿದ್ದರು.

ಅವರು ಹೇಳಿದ ಮಾತುಗಳು………… ಗುಂಯ್ಗೊಡತೊಡಗಿದವು. ‘ಕಲ್ಲೆಸೆದರು, ಗಾಜುಗಳನ್ನು ಒಡೆದರು’- ಎನ್ನುವುದು. ಅದರೊಂದಿಗೆ ಅವನಿಗೆ ಉಸ್ಮಾನ್, ಅಜೀಜ್, ಷರೀಫರೊಂದಿಗೆ ಗೋರಿಗಂಡಿಯ ದಗರ್ಾದ ಉರೂಸಿನಲ್ಲಿ, ಅಪ್ಪನ ಕಣ್ಣು ತಪ್ಪಿಸಿ ಅವನು, ಅವನ ಕಣ್ಣು ತಪ್ಪಿಸಿ ಅವನಪ್ಪ ಉಂಡಿದ್ದು ನೆನಪಾದವು. ಹರಕೆ ಹಾಕಿ ಕೈ ಮುಗಿದಾಗ ಉಸ್ಮಾನ್ ಪಕಪಕನೆ ನಕ್ಕಿದ್ದನ್ನು ಪೆಕರನಂತೆ ನೋಡಿದ್ದು ನೆನಪಾಗಿ, ಗಾಢ ವಿಷಾದದ ನಡುವೆ ಒಂದು ಕ್ಷಣ ನಗುವೊಂದು ಸುಳಿದು ಹೋಯಿತು ಅವನ ತುಟಿಗಳಲ್ಲಿ. ಈ ಊರಿಗೆ ಯಾವ ಗರ ಬಡಿಯಿತು? ಏನಾಯಿತು ಈ ಊರಿಗೆ? ಪ್ರಶ್ನೆ ಅವನನ್ನು ಬೆಳಗ್ಗಿನಿಂದ ಕಾಡಿಸುತ್ತಿದೆ.


ಅಷ್ಟಕ್ಕೆ ನಿಂತಿರಲಿಲ್ಲ ಹಮೀದ್ ಕಾಕನ ಮಾತು ‘ಎಲ್ಲಾ………… ನಿನಗೆ ತಿಳಿದವರೆ………….. ನಿನ್ನೊಟ್ಟಿಗೆ ಆಡಿ ಬೆಳೆದವರೆ………… ಕಾಕಾ……………. ಚಾ………… ಕೊಡಿ………… ಕಾಫಿ ಕೊಡಿಯಂತಾ………. ನನ್ನ ಕಣ್ಮುಂದೆ ಬೆಳೆದವರೆ’ ಎನ್ನುವಾಗ ಕಾಕಾನ ಕಣ್ಣಲ್ಲಿ ಅವನಿಗೆ ಕಂಡಿದ್ದು ವಿಷಾದಕ್ಕಿಂತ, ನೋವು, ಹತಾಶೆ, ಭ್ರಮನಿರಸನಗಳು.
ಈ ‘ಎಲ್ಲಾ’ಗಳ ನಡುವೆ ಉಸ್ಮಾನಿನ ಮನೆಗೆ ಭಾರವನ್ನೆಲ್ಲಾ ಹೊತ್ತುಕೊಂಡು ಹೋದರೆ ಅವನು ಕಡವಂತಿ ಕಡೆಗೆ ಲಾರಿ ಹತ್ತಿ, ಟಿಂಬರ್ ಕೆಲಸಕ್ಕೆ ಹೊರಟುಹೋದ ವಿಚಾರ ಅವನ ಊಮ್ಮಾನಿಂದ ತಿಳಿದು ಊರೆಲ್ಲಾ ಸವರ್ೆ ನಡೆಸಿ, ಚಿಕ್ಕಮ್ಮನ ಮನೆಗೆ ತೆರಳುವ ಮುನ್ನಾ ಇಲ್ಲಿ ಬಂದು ಗತಗಳ ಎಣಿಕೆಯಲ್ಲಿ ತೊಡಗಿದ್ದ.

ಸಮಯ ಉರುಳುತ್ತಿತ್ತು. ಕತ್ತಲಲ್ಲಿ ಮೌನದ ಜಪ ಮಾಡುತ್ತಾ ನಿಂತಿದ್ದ. ಬೀಸುವ ಗಾಳಿ ತನ್ನ ಕರ್ತವ್ಯ ಮುಗಿಸಿ ಹೊದಂತಿತ್ತು. ಟಾಚರ್್ಲೈಟ್ ರಸ್ತೆ ಮೇಲೆ ಚೆಲ್ಲುತ್ತಾ ರಮ್ಮಿ ಆಡುತ್ತಾ ಹಣ ಕಳೆದುಕೊಂಡವರು ಆ ಬೇಸರದಲ್ಲಿ ಒಂದಿಷ್ಟು ಮದ್ಯ ಕುಡಿದು ಆಟದ ಮಾತನ್ನು ಆಡುತ್ತಾ ಇಳಿದು ಹೋಗುತ್ತಿರುವುದು ಅವನಿಗೆ ಕೇಳಿಸುತಿತ್ತು. ಕತ್ತಲಲ್ಲಿ ಯಾರೆಂದು ಗುರುತು ತಿಳಿಯದ ವ್ಯಕ್ತಿ ಕುಡಿತ ಹೆಚ್ಚಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸುತ್ತಿದ್ದಾನೆ. ಕéಣಗಳು ಉದ್ದವಾಗಿರುವ ಹೊತ್ತಿನಲ್ಲಿ ಬೈಕೊಂದು ಭರ್ರನೆ ಸದ್ದು ಮಾಡುತ್ತಾ. ಬೆಳಕು ಬೀರುತ್ತಾ ಚಲಿಸಿತು. ಆ ಶಬ್ದಗಳು ದೂರದೂರವಾಗುತ್ತಾ ಮರೆಯಾಯಿತು. ಉಸಿರನ್ನು ಚೆಲ್ಲಿ ಆಕಾಶವನ್ನು ನೋಡಿದ-


ಬಾನಿನಲ್ಲಿ ಹೊಸ ಹೊಸ ನಕ್ಷತ್ರಗಳು ಮೊದಲು ಉಪಸ್ಥಿತವಿದ್ದ ನಕ್ಷತ್ರಗಳಿಗೆ ಸವಾಲನ್ನು ಹಾಕುತ್ತಾ ಪ್ರಕಾಶಮಾನವಾಗಿ ಹುಟ್ಟು ಪಡದುಕೊಂಡು ದಿಗಂತವೆಲ್ಲಾ ಹರಡಿಕೊಳ್ಳತೊಡಗಿದವು. ಕತ್ತಲು ಊರನ್ನೆಲ್ಲಾ ತುಂಬಿಕೊಂಡ ಮೇಲೆ ಮನೆಗಳೆಲ್ಲಾ ದೀಪದ ಬೆಳಕಿನಲ್ಲಿ ಲಕಲಕಿಸತೊಡಗಿದವು. ಈ ದೀಪಗಳ ಬೆಳಕಿನಲ್ಲಿ ಸುರಿಯುತ್ತಿದ್ದ ಹಿಮ ತೆಳುವಾದ ಪರದೆಯ ಹಾಗೆ ಕಾಣಿಸುತ್ತಿತ್ತು. ಮುಂದಿರುವ ದಾರಿಯನ್ನು ಮುಚ್ಚಿದಂತೆ ಕಾಣುತಿತ್ತು. ಹಿಮ ಎಲೆಗಳ ಮೇಲೆ ಸುರಿದು ಅಲ್ಲಿಂದ ಹನಿಗಳಾಗಿ ನೆಲಕ್ಕೆ ಹನಿದು ಮಣ್ಣನನ್ನು ಒದ್ದೆಗೊಳಿಸುತ್ತಿತ್ತು. ತನ್ನನು ತಾನು ಬೆಚ್ಚಗಿಡಲು ಅಂಗೈ ಪರಸ್ಪರ ಉಜ್ಜಿಕೊಂಡ. ಬಾವಿಕಟ್ಟೆಗೆ ಒರಗಿದ. ಅವು ಆಗಲೇ ಒದ್ದೆಗೊಳ್ಳಲು ಆರಂಭಿಸಿತು. ಹಿಂದೆ ಇಲ್ಲಿ ನಿಂತಾಗ ಕೇಳುತ್ತಿದ್ದ ಇಕ್ಬಾಲ್ ಕಾಕನ ಮಗುವಿನ ಆಳುವಿನ ಸುದ್ದಿಯಿರಲಿಲ್ಲ. ಈಗ ಬಹುಶಃ ಶಾಲೆಗೆ ಹೋಗುತ್ತಿರಬಹುದು ಎಂದು ಯೋಚಿಸಿದ.


ಬಾವಿಕಟ್ಟೆಯ ಎದುರಿರುವ ರಸ್ತೆಯ ಮನೆಯಲ್ಲಿ ಕೆಮ್ಮಿದ, ಪಾತ್ರೆಗಳ ಸದ್ದು ಕೇಳಿ ಬರುತಿತ್ತು. ಅವನ ಯೋಚನೆಗಳು ಪೂರ್ಣಗೊಂಡು ಇನ್ನೊಂದು ತಲೆಯೊಳಗೆ ಹೊಕ್ಕುವುದನ್ನು ಮುರಿದು ಹಾಕಿ ಕತ್ತಲು ಮತ್ತು ಇಕ್ಬಾಲ್ ಕಾಕನ ಮನೆಯ ಬೆಳಕಿಗೆ ನೆರಳಾಗಿ ಮೂಡುತ್ತಾ ತನ್ನ ಉದ್ದುದ್ದ ಕಾಲನ್ನೆತ್ತಿಡುತ್ತಾ ಬಂದ ಕೆದರಿದ ಕೂದಲು, ಕುರುಚಲು ಗಡ್ಡವನ್ನು ಕಂಡು ‘ಉಸ್ಮಾನ್’ ಎಂದು ಉದ್ಗರಿಸಿದ. ಆತ ಅದರ ಪರಿವೇ ಇಲ್ಲದವನಂತೆ ತನ್ನ ಲೋಕದ ಸ್ವಗತದ ಮಾತುಗಳನ್ನು ಹೇಳುವಂತೆ-‘ನನಗೆ ಗೊತ್ತಿತ್ತು ನೀನೂ ಇಲ್ಲೇ ಇರ್ತಿಯಾ’ ಎನ್ನುತ್ತಾ ‘ಉಸ್ಸಪ್ಪಾ’ ಎಂದು ಹಿಂದಿನಂತೆ ಬಾವಿಕಟ್ಟೆಯ ದಂಡೆಗೆ ಬೆನ್ನನ್ನು ಒರಗಿಸಿ ನೆಲದ ಮೇಲೆ ಕುಳಿತ ಮೇಲೆ ಇವನಿಗೂ ಕೂರದೆ ವಿಧಿಯಿರಲಿಲ್ಲ.


ಮಾತಾಡದೆ ದೀರ್ಘ ಮೌನವನ್ನು ಧರಿಸಿಕೊಂಡ. ಅವನ ಸುಳಿದಾಡುವ ಉಸಿರೊಂದು ಆಗ ಹುಟ್ಟುತ್ತಿದ್ದ ಮೌನದ ನಡುವೆ ಕೇಳಿ ಬರುತ್ತಿತ್ತು.


ಅವನು ಕೂತ ನೇರಕ್ಕೆ ಎತ್ತಲೋ ನೋಡುತ್ತಾ, ‘ಉಮ್ಮಾ, ಹೇಳಿದಳು, ಮನೆಕಡೆಗೆ ಹುಡುಕಿಕೊಂಡು ಬಂದಿದ್ದಿಯಾಂತ’, ‘ಪೇಟೆಯಲ್ಲಿ ಯಾರೋ ಹೇಳಿದರು ಮನೆಗೆ ಹೋದೆಯಂತಾ’ ಮತ್ತೆ ಹೇಳಿದ ‘ಇಲ್ಲಿ ನೆರಳು ಕಾಣಿಸಿತು. ನನಗೆ ಗೊತ್ತಿತ್ತು ನೀನೂ ಇಲ್ಲೇ ಇರ್ತಿಯಾಂತ’ ಹೇಳಿ ಗಾಢವಾಗುತ್ತಿದ್ದ ಕತ್ತಲಿನೊಡನೆ ದೀರ್ಘ ಮೌನಕ್ಕೆ ಜಾರಿದವನೊಡನೆ ಏನೂ ಮಾತು ತೋಚದೆ ತಡವರಿಸತೊಡಗಿದ ಅನಿರುದ್ಧ್.


ಮೌನದ ತೆರೆ ಸರಿಸುವ ಸಲುವಾಗಿ ‘ಹೇಗಿದ್ದೀಯಾ’ ಎಂದು ಪ್ರಶ್ನಿಸಿದ.


‘ಓಡಿ ಹೋಗಬೇಕು ಅನಿಸುತ್ತೆ. ದೂರ………. ತುಂಬಾ ………. ದೂರ’ ಎಂದು ವಿಚಿತ್ರ ಉತ್ತರವೊಂದು ಆದ್ರ್ರವಾದ ಧ್ವನಿಯಲ್ಲಿ ಹೊರಬಂದಿತು. ಅವನಿಂದ ಯಾವತ್ತು ಇಂತಹ ಮಾತುಗಳನು ಹಿಂದೆ ಕೇಳಿರಲಿಲ್ಲ. ನಿಗೂಢ ಮಾತುಗಳು ಬದುಕಿನ ಕನ್ನಡಿಯಾಗಿರಬಹುದು ಅಂದನಿಸಿತವನಿಗೆ. ಬಾವಿ ಕೂಡಾ ಒಳಗೊಳಗೆ ಸದ್ದನ್ನು ಮಾಡುತ್ತಾ ನಿಗೂಢವನ್ನು ಹೊತ್ತಂತೆ ಕಾಣಿಸುತ್ತಿತ್ತು. ಈ ಮೌನಕ್ಕೆ ಅವನದ್ದೇಯಾದ ಅರ್ಥವನ್ನು ಆರೋಪಿಸಿಕೊಂಡವನು ಮಾತು ಹೇಳಲಾಗದ ನೂರು ಮಾತನ್ನು ಮೌನಕ್ಕೆ ಹೇಳುವ ಶಕ್ತಿಯಿದೆಯೆಂದು ಎಲ್ಲೋ ಓದಿದ್ದನ್ನು ನೆನಪಿಸಿಕೊಂಡ. ಆದರೆ ಈ ಮೌನ ಸ್ಮಶಾನದ ಗೋರಿಗಳ ಮೌನವನ್ನು ತೋರಿಸುತ್ತಿತ್ತು.


ತಾನು ಕೊನೆಯ ಬಾರಿ ಉಸ್ಮಾನನ್ನು ಬಂದರಿನ ಬೀಬಿ ಅಲಾಬಿ ರಸ್ತೆಯಲ್ಲಿ ಭೇಟಿಯಾಗಿದ್ದು ಒಂದೂವರೆ ವರ್ಷದ ಹಿಂದಿರಬೇಕೆಂದು ನೆನಪಿಸಿಕೊಂಡು ‘ಮಂಗಳೂರಿನಿಂದ ಹಿಂತಿರುಗಿದ್ದು 0ಾವಾಗ’ ಎಂದು ಪ್ರಶ್ನಿಸಿದ.
ಅಷ್ಟೇ ಚುರುಕಾಗಿ ‘ಒಂದು ವರ್ಷವಾಯಿತು’ ಎಂಬ ಉತ್ತರ ಬಾಯಿಂದ ಹೊರ ಬಂದಿತು.


ನಿಡಿದಾಗಿ ಉಸಿರನ್ನು ಒಳಗೆ ತೆಗೆದುಕೊಂಡು ಅಷ್ಟೇ ವೇಗವಾಗಿ ಹೊರಬಿಡುತ್ತಾ ಇದ್ದ ಅವನ ತಣ್ಣನೆ0ು ಮೌನದ ಹಿಂದೆ ಎಲ್ಲವನ್ನು ಒಂದೇ ಸಲ ಉಗುಳುವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುವಂತೆ ಕಾಣಿಸುತ್ತಿತ್ತು.. ಗಳಿಗೆಗೊಮ್ಮೆ ಆ ಕುರುಚಲು ಗಡ್ಡವನ್ನು ನೀವಿಕೊಂಡು, ಕೆದರಿದ ಕೂದಲನ್ನು ಪರಪರನೆ ಕೆರೆದುಕೊಂಡು ವಿಕ್ಷಿಪ್ತ ಮನಸ್ಥಿತಿಯಲ್ಲಿರುವವನಂತೆ ಕಂಡರೂ ಅವನ ದೇಖಿ, ಮಾತು ಅದು ವಿಕéಿಪ್ತತೆಯಲ್ಲ ಎಂದು ಕಾಣುತ್ತಾ ಎಲ್ಲವೂ ಸರಿಯಿಲ್ಲ ಎನ್ನುವ ಭಾವ ಮೂಡಿಸತೊಡಗಿದ.
ಹಿಂದಿನ ಪ್ರೇಮ ಪ್ರಸಂಗವೊಂದು ನೆನಪಾಗಿ, ಅನಿರುದ್ಧ್ -‘ಸಕೀನಾಳಿಗೆ ಮದುವೆಯಾಗಿದೆ0ುಂತೆ’ ಎಂದು ಅವನ ಬದುಕಿನ ಚೂರಾದ ಕನಸನ್ನು ಎತ್ತಿ ಅವನ ಮುಂದೆ ಹಿಡಿದ.


‘ಒಂದು ಮಗು ಕೂಡಾ ಇದೆ’ ಎನ್ನುವ ಉತ್ತರದಲ್ಲಿ ಆ ಕನಸು ನನ್ನದಾಗಿರಲಿಲ್ಲ ಎಂಬಷ್ಟು ನಿಲರ್ೀಪ್ತತೆಯನ್ನು ಪ್ರಕಟಿಸಿದ.
ಅದು ಹತ್ತು ಹನ್ನೆರಡು ವರ್ಷಗಳ ಹಿಂದಿನ ಕಥೆ. ಮನೆಯಲ್ಲಿ ಟಿ.ವಿ. ಇದ್ದರೆ ಮನೆಮಕ್ಕಳು ಹಾಳಾಗುತ್ತಾರೆಂದು, ಇಲ್ಲದುದಕ್ಕೆ ರೋಹಿತ್ನ ಮನೆ0ುವರು ಸಮಥರ್ಿಸುತ್ತಿದ್ದ ಕಾಲ. ಶ್ರೀಮಂತ ಪ್ಲಾಂಟರ್ಗಳ ಮನೆಯಲ್ಲಿರುತ್ತಿದ್ದ ಟಿ.ವಿ ಮೆಲ್ಲನೆ ಹಳ್ಳಿಯ ಜನರನ್ನು ಆವರಿಸುತ್ತಿದ್ದ ಸಮಯ. ಬಾಳೆಹೊನ್ನೂರಿನ ಟಾಕೀಸಿನ ಕತ್ತಲೆಯಲ್ಲಿ ಮೂಡಿ ಬರುವ ಚಿತ್ರಗಳ ವ್ಯಾಮೋಹಕ್ಕೆ ಬಿದ್ದ ಅಹಮದ್ನ ಮನೆಯವರು, ತಮ್ಮ ಮನೆಗೆ ಬಂದ ಬ್ಲಾಕ್ ಆಂಡ್ ವೈಟ್ ಟಿ.ವಿ.ಯನ್ನು ಪುಟ್ಟ ಕತ್ತಲ ಕೋಣೆಯಲ್ಲಿ, ಅವರೇ ಬೆಡ್ಶೀಟ್ನಿಂದ ಕಿಟಕಿಯನ್ನು ಮುಚ್ಚಿ ಹುಟ್ಟಿಸಿದ ಕತ್ತಲಿನಲ್ಲಿ ಅದ್ಭುತ ಲೋಕವಾಗಿ ತೆರೆದುಕೊಳ್ಳುವಾಗ ಶುಕ್ರವಾರದ ಚಿತ್ರಗೀತೆಯೋ, ಚಿತ್ರಮಂಜರಿಯೋ ಅಥವಾ ಭಾನುವಾರದ ಸಂಜೆಯ ರಾಜ್ಕುಮಾರನ ಪಿಕ್ಚರೋ ರೋಹಿತ್ನನ್ನು ಅತ್ತ ಸೆಳೆಯುವಂತೆ ಮಾಡುತ್ತಿತ್ತು. ಆಗ ಸಕೀನಾ ಒಂದೆರಡು ಬಾರಿ ಫೈಲ್ ಆಗಿ ಅವನ ಕ್ಲಾಸ್ಮೇಟ್ ಆಗಿದ್ದಳು.


ಸುತ್ತಮುತ್ತಲೂ ಎಲ್ಲೂ ಟಿ.ವಿ. ಇರದ ಆ ದಿನಗಳದು. ಭಾನುವಾರ ಮಿನಿ ಥಿಯೇಟರ್ನಂತೆ ಕಾಣಿಸುತ್ತಿದ್ದ ಆ ಮನೆಯಲ್ಲಿ, ಬಾಗಿಲು ತೆಗೆಯಲು ಇತರರು ಗೋಗರೆಯುತ್ತಿದ್ದರು. ಮತ್ತು ಕಿಟಕಿಯೆಡೆಯಲ್ಲಿ ಒಕ್ಕಣ್ಣಿನಿಂದ ಒದ್ದಾಡುತ್ತಾ ಟಿ.ವಿ ನೋಡುತ್ತಿದ್ದರೆ, ಕ್ಲಾಸ್ಮೇಟಾದ ಅನಿರುದ್ಧ್ಗೆ ಸಕೀನಾಳ ಬಳಿಯೊಂದು ಖಾಲಿ ಜಾಗ ಕಾದಿರುತ್ತಿತ್ತು. ಮರಸುತ್ತುವ ನಾಯಕ-ನಾಯಕಿಯರು ಹತ್ತಿರ ಹತ್ತಿರ ಬರುತ್ತಿದ್ದಂತೆ ಜನರಿಂದ ತುಂಬಿರುವ ಅವಳ ಮನೆಯ ಟಿ.ವಿ ಇರುವ ಕೋಣೆಯಲ್ಲಿ ಮತ್ತಷ್ಟು ಅವನಿಗೆ ಒತ್ತಿ ಕೂರುತ್ತಿದ್ದಳು. ಬುಧವಾರದ ಚಿತ್ರಮಂಜರಿಯಲ್ಲಿ ಅಜಯ್ ದೇವಗನ್ನ ಚಂದ್ರಮುಖಿ ಸಿನಿಮಾದ ‘ಬಾಹೋ ಕಿ ಗರ್ಮಿಯಾ ಹಮ್ ದೋನೋ ಮಿಲ್ ರಹೇ ಹೇ’ ಹಾಡು ಪ್ರಸಾರವಾಗುವಾಗ ತಾಕುತ್ತಿದ್ದ ಅವಳ ಬಿಸಿ ದೇಹದ ಒತ್ತು ಹರೆಯ ಹುಟ್ಟಿಕೊಳ್ಳುತ್ತಿದ್ದ ದಿನದಲ್ಲಿ ಅವನ ಮೈಮನಸ್ಸನ್ನು ಬೆಚ್ಚಗೆ ಮಾಡುತ್ತಿತ್ತು. ಅವನ ಮನೆಯ ಕಾಫಿ ತೋಟದ ನಡುವಿನಲ್ಲಿರುವ ಕೆರೆಯ ನೀರಿಗೆ ಅಥವಾ ಕಸ ಕೊಯ್ಯಲು ಬಂದವಳು ಮಾತಿಗೆ ನಿಂತರೆ ಇಬ್ಬರಿಗೂ ಮಾತು ಮುಗಿ0ುದೆ ಹತ್ತಿರ ಅಗುತ್ತಿದ್ದುದನ್ನು ಆಗಾಗ್ಗೆ ಕಾಣುತ್ತಿದ್ದ ಉಸ್ಮಾನ್ ಒಂದು ದಿನ ಅನಿರುದ್ಧ್ನಲ್ಲಿ ಉಸುರಿ ಬಿಟ್ಟಿದ್ದ – ‘ಅವಳನ್ನು ಪ್ರೀತಿಸುತ್ತಿರುವ ವಿಚಾರ’.


ಸಣ್ಣದಾದ ಬಿಕ್ಕಳಿಕೆಯೋ …. ನಿಡಿದಾದ ಉಸಿರೋ ಎಂದರಿವಾಗದ ಸದ್ದೊಂದು ಹೊರಬಿದ್ದಾಗ ವಾಸ್ತವಕ್ಕೆ ಮರಳಿ ಬಂದವನು, ಸಕೀನಾಳ ವಿಚಾರವನ್ನು ಪ್ರಸ್ತಾಪಿಸಿದ್ದೇ ಘೋರ ತಪ್ಪಾಯಿತೆಂದು. ‘ಸ್ಸಾರಿ’ ಎಂದರೂ, ಕುತೂಹಲ ತಾಳಲಾರದೆ ‘ನೀನೇಕೆ ಸಕೀನಾಳನ್ನು ಮದುವೆಯಾಗಲಿಲ್ಲ’ ಎನ್ನುವ ಮಾತು ಅನುಚಿತವೆನಿಸಿದರೂ ಕೇಳಿದ.


ರೋಹಿತ್ನನ್ನೇ ವಿಚಿತ್ರವಾಗಿ ಕ್ಷಣ ದಿಟ್ಟಿಸಿದ. ಹೇಳುವುದಕ್ಕೆ ಸಿದ್ಧತೆಯೆಂಬಂತೆ. ಉಸಿರೊಂದನ್ನು ಹೊರ ಚೆಲ್ಲಿದ. ಮಾತುಗಳು ತಕ್ಷಣ ಸ್ಪಂದಿಸದ್ದರೂ ಮೆಲ್ಲಮೆಲ್ಲನೆ ಹೊರಕ್ಕಿಳಿಯತೊಡಗಿತು.


‘ಹೌದು. ಮದುವೆಯಾಗಬೇಕೆಂದಿದ್ದೆ. ಆದರೆ, ಹಠಾತ್ತನೆ ತೀರಿ ಹೋದ ಅಪ್ಪ. ಮದುವೆಯಾಗಬೇಕಿದ್ದ ತಂಗಿ, ಸದಾ ಲಿವರ್ನ ತೊಂದರೆಯಿಂದ ಬಳಲುವ ತಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿಯಿತ್ತು’ ಎಂದು ಒಂದಿಷ್ಟು ಅಂತರವನ್ನಿಕ್ಕಿ……….. ಅವನ ಕತೆಯನ್ನು ಇನ್ನಷ್ಟು ಜತನವಾಗಿ ಹೇಳವಂತೆ-


‘ನಿನಗೆ ಗೊತ್ತಲ್ಲ, ಊರೂರು ಸುತ್ತಿದೆ, ಅದು-ಇದು ಎನ್ನದೆ ದುಡಿದೆ. ಗುಜರಿ ಹೆಕ್ಕಿದೆ. ಜಾತ್ರೆಯಲ್ಲಿ ಆಟದ ಸಾಮಾನನ್ನು ಮಾರಿದೆ; ಎಲ್ಲೂ ಕೆಲಸವಿರದಿದ್ದಾಗ ಟಿಂಬರ್ನ ಕೆಲಸ ಮಾಡಿದೆ. ತಂಗಿಯ ಮದುವೆಯೂ ಆಯಿತು. ಎಲ್ಲಾ ಮುಗಿದಾಗ ನಾನು ಬೆತ್ತಲಾಗಿದ್ದೆ. ನನ್ನಲ್ಲೇನೂ ಇರಲಿಲ್ಲ. ಆ ಹೊತ್ತಿನಲ್ಲಿ ಸಕೀನಾಳ ಮದುವೆ ವಿಚಾರವೂ ಆಗುತ್ತಿತ್ತು’
ಉಸ್ಮಾನ್ ಈಗ ಕೊಂಚ ಉದ್ವಿಗ್ನಗೊಂಡ. ಮಾತುಗಳು ಏರುಪೇರಾಗತೊಡಗಿತು.


‘ನಿಜವಾಗಿಯೂ ನನಗವಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲವೆಂದೆನಿಸುತ್ತಿತ್ತು – ಆ ಹೊತ್ತಿನಲ್ಲಿ. ನೇರವಾಗಿ ಅವಳ ಮನೆಗೆ ಹೋದೆ. ಕೇಳಿದೆ. ಅವಳನ್ನು ಮದುವೆಯಾಗುತ್ತೇನೆಂದು ಅವಳಪ್ಪನಲ್ಲಿ ಹೇಳಿದೆ. ಹೊಡೆದ, ತುಂಬಾ ಹೊಡೆದ. ಅವನ ಮನೆಯಿಂದ ನಿಮ್ಮ ಮನೆಯ ಉಣಗೋಲಿನ ಗೇಟಿನವರೆಗೆ. ಅವರು ಯೋಗ್ಯತೆಯ ಲೆಕ್ಕಾಚಾರದಲ್ಲಿದ್ದರು. ಗುಣದಲ್ಲಲ್ಲ. ಯಾರೂ ಏನು ಹೇಳಿದರೂ ಬೇಜಾರಾಗುತ್ತಿರಲಿಲ್ಲ . ನಿನಗೆ ಗೊತ್ತಲ್ಲ ನಾನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆ ಅಂತಾ. ಸಕೀನಾಳಿಂದಲೂ ಛಿ! ಥೂ! ಎನಿಸಿಕೊಂಡ ಮೇಲೆ ಅವಳಿಗಾಗಿ ಕಾಯುವುದು ವ್ಯರ್ಥವೆನಿಸಿತು. ಊರಿಗೆ ಊರೇ ನನ್ನ ನೋಡಿ ನಗುತ್ತಿತ್ತು. ಯಾರಿಗೂ ಮುಖ ತೋರಿಸಲಾಗದೆ ಊರೇ ಬಿಟ್ಟು ಬಿಟ್ಟೆ’ ಎಂದಾಗ ಧ್ವನಿ ಕ್ಷೀಣವಾಗಿದ್ದರೂ ಇದೀಗ ನನ್ನ ಬದುಕಿನ ವಿಚಾರಗಳಾಗಿ ಉಳಿದಿಲ್ಲವೆನ್ನುವ ನಿಲರ್ಿಪ್ತತೆ ಇಣುಕುತಿತ್ತು.


‘ಕೊನೆಯ ಬಾರಿಗೆ ನಿನಗೆ ಬಂದರಿನ ರಸ್ತೆಯಲ್ಲಿ ಸಿಕ್ಕಿದ್ದೆನಲ್ಲಾ. ಆಗ ನಾನು ಊರು ಬಿಟ್ಟು ಒಂದು ವರ್ಷ ಚಿಲ್ಲರೆ ಆಗಿರಬಹುದು. ನಾನು ಆಗ ಊರೂರು ಸುತ್ತುತ್ತಿದ್ದೆ. ಅವರ ಮುಂದೆ ದೊಡ್ಡ ಜನ ಆಗಬೇಕೆಂಬುದು ಮನಸ್ಸಿನಲ್ಲಿತ್ತು. ಅದಕ್ಕಾಗಿ ಎಲ್ಲೆಲ್ಲೋ ಸುತ್ತಿದೆ. ಎಲ್ಲಾ ಕೆಲಸ ಮಾಡಿದೆ. ಎಲ್ಲೋ ಬಯಲಿನಲ್ಲಿ , ಮತ್ತೆಲ್ಲೋ ಯಕ್ಷಗಾನ, “ಗಜಮುಖದವಂಗೆ ಗಣಪಂಗೆ” ಎಂದು ಶುರುವಾಗುವಾಗ ಅದನ್ನು ಕೇಳುತ್ತಾ ಚರಮುರಿ, ಕಡ್ಲೆ ಮಾರಿದೆ. ಇದ್ದ ಊರಿನ ಜಾತ್ರೆಯಲ್ಲಿ ಆಟದ ಸಾಮಾನು ಮಾರಿದೆ. ಸ್ವಲ್ಪ ಸಂಪಾದನೆ ಮಾಡಬೇಕು ಎಂಬ ಆಸೆಯಿತ್ತು. ಜಾತ್ರೆಯ ಗೌಜಿ ಇಳಿಯುವ ತನಕ ವ್ಯಾಪಾರಕ್ಕಾಗಿ ಕೂಗುತ್ತಿದ್ದೆ. ಮಾರನೆಯ ದಿನದ ಹಗಲು ಜಾತ್ರೆ ಮುಗಿಯುವವರೆಗೆ ಕಾಯುತ್ತಿದ್ದೆೆ. ಕೆಲ ಜನರು ರಾತ್ರಿಯ ಆ ಗದ್ದಲದಲ್ಲಿ ಕೆಲವೋಮ್ಮೆ ಕದ್ದುಕೊಂಡು ಹೋಗುತ್ತಿದ್ದರು; ಮತ್ತೆ ಕೆಲವು ಕುಡಿದು ಬರುತ್ತಿದ್ದವರು ನೇತಾಕಿದ ಬಲೂನಿಗೆ ಸೂಜಿ ಚುಚ್ಚುತ್ತಿದ್ದರು. ಬಲೂನ್ಗಳು ಒಡೆದು ಹೋಗುತ್ತಿದ್ದವು. ನನ್ನ ಕನಸಿನಂತೆ. ಲಾಸ್ ಆಗುತ್ತಿತ್ತು. ಮಾತಾಡುವ ಹಾಗಿರಲಿಲ್ಲ. ಮೌನವಾಗಿರುತ್ತಿದ್ದೆ. ಕೆಲವು ಸಲ ನಿದ್ರೆಯಿಲ್ಲದೆ ಬೇರೆ ಬೇರೆ ಕಡೆ ಜಾತ್ರೆಗೆ ಹೋಗುತ್ತಿದ್ದೆ. ಕೆಲವೆಡೆ ಜಾತ್ರೆಯಲ್ಲಿ ಅಂಗಡಿ ಇಡಲು ಜಾಗಕ್ಕಾಗಿ 500ರೂಪಾಯಿ ಕೊಡಬೇಕಾಗಿತ್ತು. ಇಲ್ಲದಿದ್ದರೆ ಜಾಗ ಕೊಡುತ್ತಿರಲಿಲ್ಲ. ಎಲ್ಲೋ ಮೂಲೆಯಲ್ಲಿ ಕೂರಬೇಕಿತ್ತು.-ವ್ಯಾಪಾರ ಆಗದ ಕಡೆ.ಕೆಲವೋಮ್ಮೆ ಅಷ್ಟು ವ್ಯಪಾರವೇ ಆಗುತ್ತಿರಲಿಲ್ಲ. ಕೆಲವೆಡೆ ಮಾತ್ರ ಚೆನ್ನಾಗಿ ಆಗುತ್ತಿತ್ತು. ನಿಜ ಹೇಳುತ್ತೇನೆ ನಾನು ಎಷ್ಟು ಊರು ಸುತ್ತಿದ್ದೇನೆಂದು ನನಗೆ ಈಗ ನೆನಪಾಗುತ್ತಿಲ್ಲ. ಎಮರ್ಾಳಿನ ಜಾತ್ರೆ ಮೊದಲು ಶುರುವಾದರೆ ದಕéಿಣ ಕನ್ನಡದಲ್ಲಿ ಮತ್ತೆ ಎಲ್ಲಡೆ ಜಾತ್ರೆ, ರಥೋತ್ಸವವೇ. ಎಲ್ಲ ಕಡೆ ಸುತ್ತಿದ್ದೇನೆ. ಆದರೆ, ಎಷ್ಟು ತಿರುಗಿದರು ನನ್ನ ಬದುಕು ಮಾತ್ರ ಜಾತ್ರೆಯಾಗಲಿಲ್ಲ. ನಾನು ಹಿಡಿದುಕೊಂಡು ಸುತ್ತಾಡುತ್ತಿದ್ದ ಬಂದರಿನ ಗುಜರಿಯಾಯಿತು. ನಿನಗೆ ನೆನಪಿರಬಹುದು’ ಎನ್ನುತ್ತಾ ಮಾತನ್ನು ತುಂಡರಿಸಿ, ಏನನ್ನೋ ಮಹತ್ತವಾದುದನ್ನು ನೆನಪಿಸುವವನಂತೆ ಅನಿರುದ್ಧ್ನನ್ನು ನೋಡಿದ. ಅವನ ನೆನಪುಗಳನ್ನು ಅಲ್ಲಾಡಿಸಿದ.

 

ಪುನಃ ಮುಂದುವರೆಸಿದ ‘ಅಂದು ಗಲಭೆ ಆಯಿತಲ್ಲ. ಒಂದು ವಾರ ಮಂಗಳೂರೆಲ್ಲಾ ಬಂದಾಗಿತ್ತು. ಆ ಗಲಭೆ ಯಾಕೆ ನಡೆದಿದ್ದು ಅಂತಾ ನನಗೂ ಗೊತ್ತಿಲ್ಲ. ಎಲ್ಲಾ ಕಡೆ ಪೋಲಿಸರು, ಅಂಗಡಿ ಪುಡಿ ಮಾಡುವವರು, ಕಲ್ಲು ಎಸೆಯುವವರು. ಆಗ ನಾನು ಬಂದರಿನಲ್ಲಿ ಸಿಕ್ಕಿ ಬಿದ್ದಿದ್ದೆ. ಹೆದರಿದ್ದೆ. ಮೊದಲೇ ಮನೆ-ಮಠ ಇರಲಿಲ್ಲ. ಬರೀ ಕಬ್ಬಿಣ ಬಾಟಲಿಗಳ ಮಧ್ಯೆ ಗುಜರಿ ಅಂಗಡಿಯಲ್ಲಿ ಮಲಗುತ್ತಿದ್ದೆ. ಎರಡು ದಿನದಲ್ಲಿ ಸರಿಯಾಗಬಹುದು ಅಂದುಕೊಂಡಿದ್ದೆ. ಆಗಲಿಲ್ಲ. ಕಪ್ಯರ್ೂ ಇದ್ದ ದಿನದಲ್ಲಿ ಅನ್ನಕ್ಕಾಗಿ ಬೀದಿ ಬೀದಿಯಲ್ಲಿ ಒದ್ದಾಡಿದೆ. ಕಪ್ಯರ್ೂ ತೆಗೆದಾಗ ಬೆಳಗ್ಗೆ ಏನಾದರೂ ಸಿಗುತಿತ್ತು. ಇಲ್ಲದಿದ್ದರೆ ಇಲ್ಲ. ಕೆಲವರು ಕಾರ್ಸ್ಟ್ರೀಟ್ನಿಂದ ಬಂದರಿಗೆ, ಬಂದರಿನಿಂದ ಕಾರ್ಸ್ಟ್ರೀಟ್ಗೆ ಕಲ್ಲು ಎಸೆಯುತ್ತಿದ್ದರು. ಇಲ್ಲಿಂದ ಹೋಗೋಣವೆಂದರೆ ಯಾವ ಬಸ್ಸು ಕೂಡಾ ಬರುತ್ತಿರಲಿಲ್ಲ. ಎಲ್ಲಾ ಬಂದ್ ಅಗಿತ್ತು. ನಿನಗೆ ಗೊತ್ತಲ್ಲ ಆಗ ಹೇಗೆ ಇತ್ತು ಅಂತಾ. ಅದೊಂದು ದಿನ ಯಾವ ಮಾಯಕವೋ ಏನೋ ಪೋಲೀಸರ ಕಣ್ಣಿಗೆ ಸಿಕ್ಕಿಬಿದ್ದೆ. ಈ ಗಡ್ಡ ಎಲ್ಲವನ್ನು ಹೇಳುತ್ತೆ. ‘ಸಾಯಿಬೇನಾ ಪಾಡ್ಲೆ’ ಎಂದು ಪೋಲಿಸರು ಹೊಡೆದರು. ಸುಖಾಸುಮ್ಮನೆ ಜೈಲು ಸೇರಿದೆ’ ಎನ್ನುವಾಗ ಅಯ್ಯೋ ಪಾಪ ಎನಿಸಿತು ಅನಿರುದ್ಧ್ಗೆ.


ಮೊದಲಿನಿಂದಲೂ ಅವನು ಹಾಗೆನೇ. ಸ್ವಲ್ಪ ಜನ ಸೇರಿದರೆ ಅದರ ಹಿಂದೆ ನಿಂತು ನೋಡುವ ಜಾಯಮಾನದವನು. ಬರೀ ಬುದ್ದು.


‘ಅನಿ, ನಿಜವಾಗಿ ನಂಬು ನಾನೇನೂ ಮಾಡಿರಲಿಲ್ಲ. ಸುಮ್ಮನೆ ಶಿಕ್ಷೆ ಅನುಭವಿಸಿದೆ. ಅತ್ತೆ; ನನ್ನಷ್ಟಕ್ಕೆ ನಕ್ಕೆ. ಯಾರೂ ಕರೆದು ಕೇಳಲಿಲ್ಲ. ಮತ್ತೆ ಹೇಗೋ ಹೊರಗೆ ಬಂದೆ. ಈಗಲೂ ಕೇಸ್ ಹಾಗೆ ಇದೆ. ಆವರೆಗೆ ಕೂಡಿಟ್ಟ ಹಣವೆಲ್ಲಾ ಖಾಲಿಯಾಯಿತು. ಮನುಷ್ಯರಲ್ಲದ ಜನರ ಸಹವಾಸ ಬೇಡವೆನಿಸಿತು. ಎಲ್ಲಕ್ಕಿಂತಲೂ ನೆಮ್ಮದಿ ಬೇಕೆನಿಸಿತು. ಮತ್ತೆ ಊರಿಗೆ ಬಂದೆ. ಮತ್ತೆ ಟಿಂಬರ್ ಕೆಲಸ ಮಾಡತೊಡಗಿದೆ. ಆದರೆ……….’ ಎನ್ನುವುದರೊಂದಿಗೆ ತನ್ನೆದೆಯಲ್ಲಿ ಅದುಮಿಟ್ಟ ದುಃಖವನ್ನು ತೊಟ್ಟುತೊಟ್ಟಾಗಿ ಹೊರ ಚೆಲ್ಲುವಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ.
ಸಂತೈಸುವವನಂತೆ ತಲೆಯಲ್ಲಿ ಕೈಯಾಡಿಸಿದೆ.
‘ಅಹಮದ್ ಹೊಡೆದಾಗಲೂ ನೋವಾಗಿರಲಿಲ್ಲ. ಪೋಲೀಸರು ತದುಕಿದಾಗ ಯಾಕೆ ತದುಕಿದರೆಂದು ತಿಳಿಯದಿದ್ದರೂ ಎದೆಗೆ ಘಾಸಿಯಾಗಲಿಲ್ಲ. ಆದರೆ……….. ಎಲ್ಲಾ ನಮ್ಮವರೆ……….. ಆ ದಿನ ಉಜ್ಜಿನಿಯಿಂದ ಬರುವಾಗ ಸಿಕ್ಕಿದ ಟೆಂಪೋದಲ್ಲಿ ಬಂದಿದ್ದೆ. ನಿನಗೆ ಗೊತ್ತಿದೆಯಲ್ಲ ಅಲ್ಲಿಂದ ಹಿಂದೆ ಬರುವುದಕ್ಕೆ ಬಸ್ಸು-ಗಿಸ್ಸು ಇಲ್ಲಾಂತ. ಅದಕ್ಕೆ ಸಿಕ್ಕಿದರಲ್ಲಿ ಹತ್ತಿದ್ದೆ. ಅದರಲ್ಲಿ ದನವಿದೆಯೆಂದು ದೇವರಾಣೆಗೂ ನನಗೆ ಗೊತ್ತಿರಲಿಲ್ಲ. ಅಡ್ಡ ಹಾಕಿ ಎಲ್ಲರಿಗೂ ಹೊಡೆದರು. ನನಗೂ ಬಿಡಲಿಲ್ಲ. ನೀನು ಮಂಗಳೂರು ಕೋಮು ಗಲಭೆಯಲ್ಲಿ ಸಿಕ್ಕಿ ಬಿದ್ದಿದ್ದು ಗೊತ್ತಿದೆ , ಬೋಳಿಮಗನೇ ಎಂದು ತುಳಿದರು. ಮುಳ್ಳು ಚುಚ್ಚಿದಾಗ ನಾನೇ ಕಿತು, ನನ್ನ ಪಂಚೆಯನ್ನು ಹರಿದು ಬ್ಯಾಂಡೇಜ್ ಕಟ್ಟಿದ ಕಾಲುಗಳವು….. ಮೈಗೆ ನೋವಾಗಲಿಲ್ಲ ಒಂದೊಂದು ಒದೆತವೂ ಇಲ್ಲಿಗೆ ಬಿತ್ತು’ ಎಂದು ಅನಿರುದ್ಧ್ನ ಕೈಗಳನ್ನು ಎದೆಯ ಮೇಲಿಟ್ಟನು.
‘ಇಲ್ಲಿ ನೋಡು. ಈ ಕಲೆ ಗುರುತು ಆವತ್ತಿನದ್ದೆ…… ನೋಡು, ಕೈಗೆ ಸಿಗುತ್ತಿದೆಯಲ್ಲ’ ಎಂದು ಹೇಳುತ್ತಾ ಅವನ ಕೈ ಹಿಡಿದು ಮೈಯೆಲ್ಲಾ ತೋರಿಸತೊಡಗಿದ.
‘ಯಾರು?’ ಎನ್ನುವ ಪ್ರಶ್ನೆಯೊಂದು ನೋವಿನಿಂದ ರೋಹಿತ್ನ ಬಾಯಿಯಿಂದ ಹೊರಟಿತು.
‘ಎಲ್ಲಾ ನಮ್ಮವರೆ, ನಮ್ಮೊಡನೆ ಸೀಗೆ ಕಿತ್ತವರು, ಹೊಳೆ ಬದಿಯ ಅಳೆದವರೆಂದು ಹೇಳಿದರೂ ಜಪ್ಪಯ್ಯ ಎಂದರೂ ಹೆಸರನ್ನು ಹೇಳಲಿಲ್ಲ. ಮೌನವಾದ. ಅನಿರುದ್ಧನ ಕಣ್ಣ ಮುಂದೆ ಅವರ ಚಿತ್ರ ಸುಳಿಯದಂತೆ ತಣ್ಣನೆಯ ಮೌನಕಷ್ಟೇ ಜಾಗ ನೀಡಿದ. ಪುನಃ ಹೇಳತೊಡಗಿದ.


‘ಈಗ ಇವರೆಲ್ಲರೂ ಕಟ್ಟುವುದಕ್ಕೆ ಹೊರಟವರೊಡನೆ ಬೆಟ್ಟಕ್ಕೂ ಹತ್ತಿದ್ದಾರೆ’ ಎಂದು. ಅವನಿಗೆ ಅವಕಾಶ ಕೊಡುತ್ತಿರುವಂತೆ ಸುಮ್ಮನಾದ.
ಬೆಟ್ಟ ಎಂದ ತಕ್ಷಣ ಇದೇ ಉಸ್ಮಾನಿನೊಡನೆ ಗಿರಿಯನ್ನು ಹತ್ತಿದ್ದು, ರೋಹಿತ್ನಿಗೆ ನೆನಪಾಯಿತು. ಮನೆಯಲ್ಲಿ ಸತ್ಯನಾರಾಯಣ ಕಥೆಗೆಂದು ಹುಂಡಿಯಲ್ಲಿ ಹಾಕಿಟ್ಟ ಹತ್ತರ ನಾಲ್ಕು ನೋಟನ್ನು ಲಪಟಾಯಿಸಿ ಕಥೆಯೋ, ವ್ಯಥೆಯೋ ಎಂದು ಗಿರಿಯನ್ನು ಹತ್ತಿ, ಚಿಕ್ಕಮಗಳೂರಿನ ಟಾಕೀಸ್ನಲ್ಲಿ ಬೆಂಗಳೂರು ಭೂಗತ ಲೋಕದ ಕುರಿತ ಸಿನಿಮಾವೊಂದರಲ್ಲಿ ರಕ್ತವನ್ನು ಕಂಡು ಅರ್ಧದಲ್ಲೆದ್ದು ಬಂದಿದ್ದು ಕೂಡಾ ಮನಸ್ಸಿನಲ್ಲಿ ಸುಳಿಯಿತು.


ಉಸ್ಮಾನಿನ ಮಾತು ಮುಗಿದಿರಲಿಲ್ಲ. ಪಶ್ಚಿಮಘಟ್ಟ ತನ್ನೊಳಗಿರುವುದನ್ನೆಲ್ಲಾ ಒಮ್ಮೆಲೆ ಅನಾವರಣಗೊಳಿಸುವಂತೆ ಎಲ್ಲವನ್ನೂ ಬಿಚ್ಚಿಡತೊಡಗಿದ.
‘ಈಗ ಎಲ್ಲರೂ ಕಟ್ಟಲು ಹೊರಟವರೆ. ಇದ್ದುದನ್ನು ಸರಿಯಾಗಿ ಇಟ್ಟುಕೊಂಡವರಲ್ಲ’. ಎನ್ನುತ್ತಾ ಪಕ್ಕದ ಬೇಲಿ0ು ಆಚೆ ಬದಿಯಿಂದ ಕಾಣುವ ಕಾನ್ವೆಂಟ್ ಶಾಲೆ0ು ಬೆಳಕಿನ ಕಿರಣಗಳನ್ನು ಬಸಿದು ತಾನು ಶಕ್ತಿ ಪಡೆದುಕೊಳ್ಳುತ್ತಿರುವಂತೆ ನೋಡುತ್ತಾ ಹೇಳತೊಡಗಿದ.
‘ಖಾಂಡ್ಯದ ………. ಅದೇ ನಿನಗಿಷ್ಟವಾದ ಪ್ರತಿಧ್ವನಿ ಹುಟ್ಟಿಸುವ ದೇವಸ್ಥಾನವಿತ್ತಲ್ಲ’ ಎಂದು ಪ್ರಶ್ನಾರ್ಥಕ ನೋಟವೊಂದನ್ನೆಸೆದ. ಉತ್ತರಕ್ಕೆ ಕಾಯದೆ, ‘ಅದೇ ……. ಅದೇನೋ ಬರೆದಿಟ್ಟ ಕಲ್ಲುಗಳಲ್ಲಿ ಅಕ್ಷರಗಳನ್ನು ಓದುದಕ್ಕೆ ಪ್ರ0ುತ್ನಿಸುತ್ತಿದ್ದೆ0ುಲ್ಲ. ಅದು ರಾಜರ ಕಾಲದ್ದು. ಅದೀಗ ಇಲ್ಲ’ ಎಂದು ವಿಚಿತ್ರ ನಗೆ0ೊಂದನ್ನು ಬೀರಿದ.
ಅನಿರುದ್ಧ್ನ ಎದೆ ದಸಕ್ಕೆಂದಿತು. ಅವನ ಅಪ್ಪ ಹೇಳುತ್ತಿದ್ದ ಪ್ರಕಾರ- ಬಹುಶ: ಜಕಣಾನ ಕಾಲದಲ್ಲಿ ಕಟ್ಟಿದ್ದೆಂದು ಹೇಳಲ್ಪಟ್ಟ ದೇಗುಲ. ಕಾರ್ಕಳದ ಗೊಮ್ಮಟ ಕೆತ್ತಿದ ಸಮ0ುದಲ್ಲಿ ಕಟ್ಟಿದ್ದಂತೆ. ಅದರೊಳಗೆ ಅಡಿಯಿಡುತ್ತಿದ್ದಂತೆ ದಿವ್ಯ ಶಾಂತತೆ0ುನ್ನೂ, ನಿಶ್ಯಬ್ದ ಉಸಿರನ್ನು ಪ್ರತಿಧ್ವನಿ0ು ಮೇಲೆ ಪ್ರತಿಧ್ವನಿ0ಾಗಿಸುವ ದೇಗುಲ ಈಗಿಲ್ಲವೆಂದರೆ ಅವನಿಗೆ ನಂಬಲಾಗಲಿಲ್ಲ. ದೇಗುಲಕ್ಕಿಂತ ಶಿಲ್ಪಿಯ ಕುಶಲತೆಗೆ ಮರುಳಾಗಿದ್ದವನ ಮನಸ್ಸು ಜಡವಾಯಿತು.


ಖಾಂಡ್ಯದ ಜಾತ್ರೆ0ುಲ್ಲಿ, ಭಾನುವಾರದ ಸಂಜೆ0ುಲ್ಲಿ ಉಸ್ಮಾನಿನ ಸೈಕಲ್ನಲ್ಲಿ ಸವಾರಿ ಹೂಡಿ ಅದರ ಸುತ್ತ ತಿರುಗಾಡುತ್ತಿದ್ದವನು ಆಘಾತದಿಂದಲೇ ಕೇಳಿದ: ‘ಏನಾಯಿತು?’


‘ಅದನ್ನು 0ಾರು ಕೇಳುವವರಿರಲಿಲ್ಲ. ಬಿರುಕು ಬಿಟ್ಟಿತ್ತು. ಬಿತ್ತು, ಒಂದೊಂದೇ ಕಂಬಗಳು ಬಿರುಕು ಬಿಟ್ಟು. ಕೊನೆಗೆ ಎಲ್ಲವನ್ನು ಕೆಡವಿದರು. ಈಗಲ್ಲಿ ಮಾರ್ಬಲ್ನಿಂದ ಕಟ್ಟಿದ್ದಾರೆ. ನಾನು ಕೆಲಸಕ್ಕೆ ನಾಲ್ಕಾರು ದಿನ ಹೋಗಿದ್ದೆ. ನೀನು ಓದುತ್ತಿದ್ದಿ0ುಲ್ಲ ಆ ಕಲ್ಲುಗಳ ಮೇಲೆನೇ ಕೂತು ಎಲ್ಲರೂ ಎಲೆ ಅಡಿಕೆ0ುನ್ನು ಜಗಿ0ುುವುದು ನೋಡಿದ್ದೇನೆ. ಅದರ ವಿಗ್ರಹಗಳೆಲ್ಲಾ ದೇವಸ್ಥಾನದ ಹಿಂದಿನ ಭದ್ರನದಿಯಲ್ಲಿ ಹಾಕಿಟ್ಟಿದ್ದಾರೆ’ ಎಂದು ಜೋರಾಗಿ ನಗತೊಡಗಿದನು.
ಆ ನಗು ಯಾಕೆಂದು ಅರ್ಥವಾಗಲಿಲ್ಲ ಅವನಿಗೆ.


‘ನಿಜ ಹೇಳುತ್ತೇನೆ. ಇದೀಗ ದೇವಸ್ಥಾನ ದೇವಸ್ಥಾನದ ತರಹ ಕಾಣುವುದಿಲ್ಲ. ಸುರತ್ಕಲ್ನ ಸದಾನಂದ್ ಹೋಟೇಲ್ಗೆ ಮಾರ್ಬಲ್ ಹಾಕಿ ಒಳ್ಳೊಳ್ಳೆ ಟ್ಯೂಬ್ಲೈಟ್ ಹಾಕಿದರಲ್ಲ ಹಾಗೆ ಕಾಣಿಸುತ್ತೆ. ಗರ್ಭಗುಡಿ ಮಾತ್ರ ಇದೆ ಮತ್ತೆ ಬರೀ ಛಾವಣಿ. ಅಲ್ಲೀಗ ಪ್ರತಿಧ್ವನಿಯಿಲ್ಲವಂತೆ’. ವಿಷಾದದ ಮಾತಿನೊಂದಿಗೆ ನಿಟ್ಟುಸಿರೊಂದನ್ನು ಹೊರಚೆಲ್ಲಿದ.
ಇಲ್ಲಿ ನಾಲ್ಕು ದಿನ ಈ ಊರಲ್ಲಿ ಇರಬೇಕು. ನಗರದ ವೇಗದ ಬದುಕಿಗೊಂದು ಕಡಿವಾಣ ಹಾಕಿ, ಹೊಸ ಚೈತನ್ಯದಿಂದ ಮರಳಬೇಕೆಂದುಕೊಂಡು ಬಂದವನಿಗೆ ಉಸಿರೇ ನಿಂತಂತೆ ಭಾಸವಾಯಿತು. ಇಲ್ಲಿಯ ಜನರೀಗ ಹಿಂದಿನವರಾಗಿ ಉಳಿದಿಲ್ಲ. ಕಪಟ ಬದುಕಿನ ಆವರಣದಲ್ಲಿ ಬದುಕುತ್ತಿದ್ದಾರೆ ಎಂದನಿಸಿತು. ನಗರದ ಹರಿದು ತಿನ್ನುವ ಕೆಲಸದ ಒತ್ತಡಕ್ಕಿಂತ, ಇಲ್ಲಿ0ು ಸ್ಥಿತಿ ಹುಟ್ಟಿಸಿದ ಶೂನ್ಯತೆ0ೊಂದು ಅವನನ್ನು ಕುಕ್ಕಿ ತಿನ್ನತೊಡಗಿತು.
ಅವರಿಬ್ಬರ ನಡುವೆ ಮಾತಾಡಲು ಬೇಕಾದಷ್ಟು ವಿಷ0ುಗಳಿದ್ದರೂ ಮೌನವು ಕೊಳೆತು ಬಿದ್ದಿತ್ತು.


ತಾನು ಹಗುರವಾದವನಂತೆ ಎದ್ದು ಬೀಡಿಯೊಂದನ್ನು ಸೇದಿ ಆಕಾಶಕ್ಕೆ ಬಿಡತೊಡಗಿದ. ‘ನಾಳೆ ಬಸಾಪುರಕ್ಕೆ ಹೋಗಬೇಕು ಬೆಳಗ್ಗೆ ಬೇಗ ಲಾರಿ ಬರುತ್ತೆ, ನಾಳೆ ಸಿಗುತ್ತೇನೆ ನಿನಗೆ’ ಎಂದು ಹೊರಡಲನುವಾದ. ‘ನೀನು ಮನೆಗೆ ಬರದಿರುತ್ತಿದ್ದರೆ ನಾನು ನಿನ್ನನ್ನು ಹುಡುಕಿಕೊಂಡು ಬರುತ್ತಿರಲಿಲ್ಲ. ನೀನು ಮರೆಯಲಿಲ್ಲ. ಬರ್ತೀನಿ’ ಎಂದು ಭಾರವನ್ನು ವಗರ್ಾಯಿಸಿ ನಿರುಮ್ಮಳವಾದವನಂತೆ ಬೀಡಿ ಹಚ್ಚಿಕೊಂಡು ಬಾನಿನತ್ತ ಹೊಗೆ0ುನ್ನು ಚೆಲ್ಲತೊಡಗಿದ.
ಅವನು ಕೂಡ ಹೆಚ್ಚು ಮಾತಾಡುವ ಮನಸ್ಥಿತಿ0ುಲ್ಲಿರಲಿಲ್ಲ. ಆಯಿತೆನ್ನುವಂತೆ ತಲೆ0ುಲ್ಲಾಡಿಸಿದ.
ಇಳಿಜಾರನ್ನು ಇಳಿದು ಮನೆ0ು ಮುಂದಿನಿಂದ ಗೆಳೆ0ುನನ್ನು ಬೀಳ್ಕೊಟ್ಟು ಅವನು ಸಾಗುವ ಹಾದಿ0ುತ್ತ ದೃಷ್ಟಿ ಹಾಯಿಸುತ್ತಾ ನಿಂತ.
ಹಿಮವು ನಿರಂತರವಾಗಿ ಬೀಳುತ್ತಿದ್ದ ವಕ್ರ ವಕ್ರವಾದ ರಸ್ತೆ0ು ಇಬ್ಬದಿ0ುಲ್ಲೂ ಬೆಳೆದ ಮರಗಳ ರೆಂಬೆಗಳು ಅತ್ತಿತ್ತ ಚಾಚಿ ನಿಮರ್ಿತವಾದ ಕತ್ತಲಿನ ಗುಹೆ0ುಂತೆ ಕಾಣಿಸುತ್ತಿದ್ದ ರಸ್ತೆ0ುಲ್ಲಿ ನಡೆ0ುುತ್ತಾ ಕತ್ತಲ ಗರ್ಭದೊಳಗೆ ಉದ್ದುದ್ದ ಕಾಲುಗಳನ್ನು ಎತ್ತಿಡುತ್ತಾ ಸ್ವಲ್ಪ ಸ್ವಲ್ಪವೇ ಮರೆ0ಾದ. ಅವನು ಕತ್ತಲನ್ನು ನುಂಗಿದನೋ ಅಥವಾ ಕತ್ತಲು ಅವನನ್ನು ನುಂಗಿತೋ ಎಂದು ತಳಿಯದಂತೆ ಕೊನೆಗೆ ಕತ್ತಲೆ0ೊಂದು ಸ್ಥಿರವಾಗಿ ಕಾಣಿಸತೊಡಗಿತು..
ಅನಿರುದ್ಧ್ನ ಕಿವಿ0ುಲ್ಲಿ ಉಸ್ಮಾನ್ ಸದಾ ಉಸುರುತ್ತಿದ್ದ ‘ಗುಡ್ಡಕ್ಕೆ ಬೆಂಕಿ ಬಿದ್ದಿತು……. ಓಡಿ’ ಎನ್ನುವ ಹಾಡು ಕಿವಿ0ುಲ್ಲಿ ಮೊಳಗುತ್ತಿತ್ತು.

 

ಛಛಛಛಛ
–ಪ್ರಸಾದ್ ಗಣಪತಿ

         this story had got 1 st prize in Late. Ganapathi Moleyara Memorial Inter state Story competition organised by Kannada Sahitya Prishath, Kerala Gadinada Ghataka

ಬಗ್ಗೆ ನೀರ ತೆರೆ
ಕಡಲ ತಡಿಯಲ್ಲಿ ಕನಸ ಕಾಣುತ್ತಾ.. ಮನಸ್ಸು ಬಂದಷ್ಟು ದೂರ ಬೇಲೆಯಲ್ಲಿ ನಡೆಯುತ್ತಾ, ಪಕ್ಕದಲ್ಲಿ ರಂಪಣಿ ಎಳೆಯುವ ಗೆಳೆಯರ " ಓ ಬೇಲೆ" ಸದ್ದಿಗೆ ಕಿವಿ ಕೊಡುವವನು ನಾನು. ಮೇಲೆಳುವ ನೀರ ತೆರೆಗೆ ಮನಸ್ಸಿನಲ್ಲಿ ತೆರೆಗಳನ್ನೆಳಿಸುತ್ತಾ ಈ ದಕ್ಷಿಣ ಕನ್ನಡ ಎಷ್ಟು ಸುಂದರವೆಂದುಕೊಳ್ಳುವವನು. ಬಾನಲ್ಲಿ ಮೂಡುವ ಚಿತ್ತಾರಗಳಿಗೆ, ಮನಸ್ಸಿನ ಚಿತ್ತಾರಗಳಿಗೆ ಉಲ್ಲಾಸಗೊಳ್ಳುತ್ತಾ ಸ್ತಬ್ದಗೊಳ್ಳುವ ದಿನಚರಿಯನ್ನು ಪಡುವಣದಲ್ಲಿ ಕಾಯುತ್ತಾ ನೀರ ತೆರೆಗಳಿಗೆ ಕಾಲೊಡ್ಡಿ ಸರಿ ರಾತ್ರಿವರೆಗೆ ಮನೆಗೆ ಹೊರಡುವವನು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: