ಆಯಸ್ಸಿನ ಮತ್ತೊಂದು ವರುಷಕ್ಕೆ ಕಾಲಿಡುತ್ತಾ

ವಯಸ್ಸು ಸಾಗಿದ್ದು ಗೊತ್ತಾಗಲಿಲ್ಲ. ಈಗ ವಯಸ್ಸನ್ನು ಎಣಿಕೆ ಮಾಡುವಾಗ ಕಾಣದ ತಳಮಳವೊಂದು ಮನದಲ್ಲಿ ಮೂಡುತ್ತಿದೆ. ಗೆಳೆಯರೆಲ್ಲಾ ಬದುಕಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇನ್ನೂ ನೆಲೆ ಕಾಣದ ಈ ಬದುಕನ್ನು ಯಾವ ದಿಕ್ಕಿನತ್ತ ಒಯ್ಯೋಣವೆಂದು ಯೋಚನೆಯಲ್ಲಿ ದಿನಾ ಸಾಗಿದೆ.

ಬದುಕಿನಲ್ಲಿ ಈ ವರುಷಕ್ಕೆಂದು ಒಂದಷ್ಟು ಗುರಿಯನ್ನು ನಿಗದಿಪಡಿಸಿಕೊಳ್ಳಬೇಕೆಂದು ಅಂದುಕೊಂಡಿದ್ದೇನೆ….

ಈ ಸೆಪ್ಟಂಬರ್ ತಿಂಗಳ ಮಧ್ಯ ಭಾಗದಲ್ಲಿ ನನ್ನ ಮೊದಲ ಸಾಕ್ಷಚಿತ್ರ ಹೊರ ಬರುತ್ತಿದೆ… ಅದರೊಂದಿಗೆ ಹೊಸ ಸಾಕ್ಷಚಿತ್ರಕ್ಕಾಗಿ ಭಾರತ ಪ್ರವಾಸ ಹೊರಡುವ ಆಲೋಚನೆಯಲ್ಲಿದ್ದೇನೆ… ಭಾವನೆಗಳನ್ನು ಹಂಚಿಕೊಳ್ಳಲು ಬರಗಾಲವಿರುವ ನಾನು ಈ ಬ್ಲಾಗ್ ನನ್ನ ಸಂಗಾತಿಯೆಂದು ಭಾವಿಸಿ ಬರೆಯುತ್ತಿದ್ದೇನೆ ……

ಈ ವರುಷವಾದರೂ ನೆಲೆ ಊರಲಿ ಬದುಕು ಅಂದುಕೊಂಡರೆ ನೆಲೆ ಊರುವ ಜಾಯಮಾನವೇ ನನ್ನದಲ್ಲವಲ್ಲ

ಹೀಗೆ ಒಂದೆರಡು ಮಾತು

 ಎಲ್ಲರಂತೆ ನಾನು ಬ್ಲಾಗಿಸಬೇಕೆಂದು ಶುರು ಹಚ್ಚಿದ ಬ್ಲಾಗ್ ಬರಹದ ವಿಕ್ಷಣೆ ಸಾವಿರದ ಗಡಿ ದಾಟಿದೆ. ಅನಿಯಮಿತವಾಗಿ ಬರೆಯುವ ನಾನು, ಕೆಲಸದಲ್ಲಿ ಎಲ್ಲೋ ಕಳೆದು ಹೋಗುತ್ತಾ ಬರೆಯುವದನ್ನು ಮರೆತಂತೆ ಕಳೆದು ಹೋಗುತ್ತಾ ಬರೆಯದೆ ಇರುವುದಕ್ಕೆ ಏನನ್ನೋ ಕಳೆದುಕೊಂಡಂತೆ ಒದ್ದಾಡುತ್ತಿರುವ ದಿನದಲ್ಲಿದ್ದೇನೆ. ನನ್ನಲ್ಲಿನ ಕನಸುಗಳು ದಿನಾ ಹೀಗೆ ಮತ್ತೆ ಬರೆಯೆಂದು ಅಥವಾ ಎಲ್ಲಾದರೂ ಪ್ರಕಟಿಸುವ ಕುರಿತು ಯೋಚಿಸುತ್ತವೆ ಆದರೆ ಇದೆಲ್ಲಾ ಯಾಕೆ ಅನಿಸುತ್ತಾ, ಮೂಲೆಯಲ್ಲಿ ಇನ್ನೂ ಪೂರ್ಣ ರೂಪ ತಾಳದೆ ಚೆಲ್ಲಾಪಿಲ್ಲಿಯಾಗಿರುವ ಕತೆಗಳನ್ನು ಅಸಹಾಯಕನಂತೆ ದಿಟ್ಟಿಸುತ್ತಾ, ಪೂರ್ಣಗೊಳ್ಳುವ ದಿನ ಎಂದಾದರೂ ಬರುವುದೋ ? ಎಂದು ನಿಟ್ಟುಸಿರು ಬಿಡುತ್ತೇನೆ.

ಆದರೆ, ಅನಾಮಿಕನಾಗಿ ತನ್ನ ಪಾಡಿಗೆ ತಾನು ಬರೆದು ಕೊಂಡಿರುವ ಸುಖ ಯಾವುದರಲ್ಲೂ ಇಲ್ಲವೆನಿಸುತ್ತಾ ಅನಾಮಿಕತೆಯಲ್ಲಿ ಬರೆಯುವ ಸುಖವನ್ನು ಧಾರಳವಾಗಿ ನಾನು ಅನುಭವಿಸಿದ್ದೇನೆ. ಅನುಭವಿಸುತ್ತಲೂ ಇದ್ದೇನೆ. ಇವೆಲ್ಲದರ ನಡುವೆ ಬರವಣಿಗೆಯಲ್ಲಿ ಸಾತತ್ಯ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲವೆಂಬುದು ಸದಾ ಕಾಡುತ್ತಿದೆ.

ಹಾಗೆಯೇ ನನ್ನ ಬರಹವನ್ನು ಓದಿ ನನ್ನನ್ನು ಮತ್ತಷ್ಟು ಬರೆಯುವ ಉತ್ಸಾಹ ತುಂಬಿದ ನನ್ನ ಬ್ಲಾಗ್ ಬರಹದ ಓದುಗಾರರಿಗೂ ಹಾಗೂ ನನ್ನ ಸಹ ಬ್ಲಾಗಿಗರಿಗೆ ಧನ್ಯವಾದಗಳು.

%d bloggers like this: