ಪಡುವಣದತ್ತ ಹಾರುತ್ತಿದ್ದ ಹಕ್ಕಿಗಳು ಸೂರ್ಯನನ್ನು ದೂಡಿಕೊಂಡು ಕಡಲಲ್ಲಿ ಮುಳುಗಿಸಲು ಹೊರಟಂತೆ ಕಾಣುತಿತ್ತು. ಇನ್ನೂ ಕೆಲವೇ ಹೊತ್ತು ಅನಂತರ ಆಗಸದಿಂದ ಸೂರ್ಯ ಮರೆಯಗುವವನಿದ್ದ. ಸಂಜೆಯ ಪರಿಮಳ ಸುತ್ತ ಪಸರಿಸುತ್ತಲಿತ್ತು. ಆತ ಒಂದೇ ಸವನೆ ನಡೆಯತೊಡಗಿದ್ದ- ಲಾಲ್‍ಭಾಗಿನಿಂದ ಹಂಪನಕಟ್ಟೆಯವರೆಗೆ. ಸಂಜೆಯ ಹೊತ್ತಾದರೂ ಕೊಂಚ ಬಿಸಿಯಾದ ಗಾಳಿ ವಾತಾವರಣದ ಸುತ್ತ ಸುಳಿದಾಡುತ್ತಿರುವಾಗ ಅವನ ಕಂಕುಳ ಕೆಳಗೆ ಬೆವರು ಮೂಡಿ ಬಟ್ಟೆಯನ್ನು ಒದ್ದೆಗೊಳಿಸಿ ಕಿರಿಕಿರಿಯನ್ನು ಉಂಟು ಮಾಡುತ್ತಿತ್ತು.
ನಾವು ಓಡುತ್ತಿರುವುದರಿಂದ ಕಾಲ ಹೆಜ್ಜೆ ಹಾಕಿ ನಡೆಯುತ್ತಿದೆ ಎಂಬಂತೆ ಬಸ್ಸುಗಳು ಗತ್ತಿನಿಂದ ವ್ಯಾಕಮ್ ಹಾರ್ನ್ ಹಾಕುತ್ತಾ ದ್ವಿಚಕ್ರ ಸವಾರರನ್ನೆಲ್ಲಾ ಉಪೇಕ್ಷಿಸಿ ಸಾಗುತ್ತಿದ್ದವು. ಇನ್ನೊಂದು ಟ್ರಿಪ್ಪಿಗೆ ಅಣಿಗೊಳ್ಳುತ್ತಿದ್ದವು. ವ್ಯಾಕಮ್ ಹಾರ್ನಿನ ಸದ್ದಿನಿಂದ ದಾರಿಯಲ್ಲಿದ್ದ ವಾಹನಗಳನ್ನು ಕಂಗಾಲಾಗಿಸಿ ದಾರಿ ಬಿಡುವಂತೆ ಮಾಡುತ್ತಿದ್ದವು. ದೂರದ ಚೌಕಿಯಲ್ಲಿ ಕುಳಿತಿದ್ದ ಪೋಲಿಸ್ ತನ್ನ ವ್ಯಾಪ್ತಿಯೊಳಗೆ ಇದೆಲ್ಲಾ ಬರುವುದಿಲ್ಲವೆಂಬಂತೆ ವಾಹನಗಳಿಗೆ ಸಿಗ್ನಲ್ ತೋರಿಸುವುದರಲ್ಲಿ ಮಗ್ನನಾಗಿದ್ದ. ಈ ಮಧ್ಯೆ ಕೆಲವು ದಾರಿ ತಪ್ಪಿ ಬಂದಂತೆ ಗೋಚರಿಸುತ್ತಿದ್ದ ಅನ್ಯ ಊರಿನ ಅತಿಥಿಗಳು “ಕೆ.ಎಸ್.ಆರ್.ಟಿ.ಸಿ ಬಸ್ಸ್ಟ್ಯಾಂಡ್ ಎಲ್ಲಿ?”, ಭಾರತ್ ಮಾಲ್ ಕಹಾ ಹೈ? ಎಂದು ಗಳಿಗೆಗೋಮ್ಮೆ ಎದುರಾಗಿ ದಾರಿ ಹೋಕರಲ್ಲಿ ಪ್ರಶ್ನಿಸುತ್ತಿದ್ದರು. ಟ್ರಾಫಿಕಿನಲ್ಲಿ ವಾಹನಗಳ ಜಮಾವಣೆ ಶುರುವಾಗಿದ್ದ ಹೊತ್ತು, ಎಲ್ಲಿಂದಲೋ ಬಂದ ಕೇರಳಿಗನೊಬ್ಬ “ಕಾರ್ಪೋರೆಶನ್ ಎವುಡೆ?” ಎಂದು ಪ್ರಶ್ನಿಸುವುದರೊಂದಿಗೆ ಅವನ ಆಲೋಚನೆಗಳು ಕಡಿತಗೊಂಡು ಮರು ಕ್ಷಣದಲ್ಲಿ ಇನ್ನೊಂದಕ್ಕೆ ಹೊರಳಿಕೊಂಡಿತು.
ಫಕ್ಕನೆ, ಮಂಗಳೂರು ದೊಡ್ಡದಾಗುತ್ತಿದೆ, ತನಗೆ ಅಪರಿಚಿತವಾಗುತ್ತಿದೆಯೆಂದು ಅವನಿಗನಿಸಿತು. ಗೊತ್ತಿಲ್ಲದ ಊರಿನ ಜನ ಇಲ್ಲಿ ನೆಲೆಯಾಗಿ ನೆಲದ ಮಣ್ಣಿನ ಪರಿಮಳ ಕಳಚಿಕೊಳ್ಳುತ್ತಿದೆ, ವಿಕೃತವಾದ ಸಂಸ್ಕೃತಿಯೊಂದು ನೆಲೆಗೊಳ್ಳುತ್ತಿದೆ ಅದರ ಜೊತೆಗೆ ಇಲ್ಲಿಯವರು ಸಂಸ್ಕೃತಿ, ಧರ್ಮವೆನ್ನುತ್ತಾ ಪಕ್ಕಾ ಬಲಪಂಥೀಯ ಹಾಗೂ ಮೂಲಭೂತವಾದಿ ದೋರಣೆಗಳನ್ನು ಹೊಂದುತ್ತಾ ಸಿಕ್ಕಸಿಕ್ಕವರನ್ನೆಲ್ಲಾ ಮೇಯಲು ಶುರು ಹಚ್ಚಿಕೊಂಡಿದ್ದು ಅವನ ಅನುಭವದಿಂದ ಸ್ಪಷ್ಟವಾಗುತ್ತಾ ಹೋಗಿದೆ. ಇದರ ಯಾವುದೇ ಲೆಕ್ಕಾ ಚುಕ್ತಾಗಳು ತನಗೆ ಬೇಡವೆಂದು ಮಹಾನಗರ ಪಾಲಿಕೆ ಕಳ್ಳ ನಿದ್ರೆಯಲ್ಲಿತ್ತು. ಅಲ್ಲಲ್ಲಿ ಭ್ರಷ್ಟಚಾರದ ವ್ಯಭಿಚಾರ ನಡೆಸುವ, ಯಜಮಾನರಂತೆ ವರ್ತಿಸುವ ಮಂದಿ ನಿಂತಿದ್ದರು.

ಮಂಗಳೂರು ಮಹಾನಗರ ಪಾಲಿಕೆ
ಅವನು ಲಾಲ್‍ಭಾಗಿಗೆ ಬಂದಿದ್ದು ಕಾರ್ಯನಿಮಿತ್ತ. ಅದು ನಡೆಯದೆ ಇದ್ದುದರಿಂದ ಈ ರೀತಿ ಗೋತ್ತು ಗುರಿಯಿಲ್ಲದಂತೆ ನಡೆಯತೊಡಗಿದ. ನಡೆದುದ್ದೆ ಹಾದಿಯಾಗಿ ಬಲ್ಲಾಳ್ ಭಾಗಿನ ಕೆಳಗಿನ ಲಿವೀಸ್ ಶೋ ರೂಮ್, ರಿಬೋಕ್ ಶೋ ರೂಮ್ ದಾಟಿ ಮುಂದೆ ನಡೆಯುತ್ತಿದ್ದ.

ಪೈ ಕನ್ವೆನ್ಶನ್ ಹಾಲ್
ದೊಡ್ಡ ಭೋರ್ಡ್ ಹೆಬ್ಬಾಗಿಲಲ್ಲಿ ತಗುಲಿಸಿಕೊಂಡ ಪೈ ಕನ್ವೆನ್ಶನ್ ಹಾಲಿನಲ್ಲಿ ಯಾವುದೋ ಕಾರ್ಯಕ್ರಮ ನಡೆಯುತ್ತಿರುವ ಹಾಗೆ ಕಾಣಿಸುತ್ತಿತ್ತು. ಸೂಟು ಬೂಟು ತೊಟ್ಟವರೆಲ್ಲಾ ಕೈ ಕುಲುಕಿ ಸ್ವಾಗತಿಸುವುದರಲ್ಲಿದ್ದರೆ, ಸೆಲ್ಯೂಟ್ ಹೊಡೆಯುತ್ತಿದ್ದ ಕಾವಲುಗಾರನ ಸೆಲ್ಯೂಟ್ ತಮ್ಮ ಲೋಕಕ್ಕೆ ಸಲ್ಲಲ್ಲೇ ಇಲ್ಲವೆಂಬಂತೆ ನಡೆಯುತ್ತಿದ್ದರು. ಆತ ಮಾತ್ರ ಅದೇ ತನ್ನ ಕೆಲಸವೆಂಬಂತೆ ಸಲಾಮ್ ಹೊಡೆಯುವುದನ್ನು ಮುಂದುವರೆಸಿದ್ದ. ಸಾಧ್ಯವಾದರೆ ಇದರೊಳಗೆ ನುಗ್ಗಿ ಏನಿದೆಯೆಂದು ನೋಡಬೇಕೆಂದು ಹಲವು ಭಾರಿ ಅಂದುಕೊಂಡಿದ್ದಾನೆ. ಅದರ ಬಾಡಿಗೆ ದಿನಕ್ಕೆ ಒಂದೂವರೆ ಲಕ್ಷಕ್ಕಿಂತ ಜಾಸ್ತಿಯೆಂದು ಗೆಳೆಯನೊಬ್ಬ ಹೇಳಿದ್ದು ನೆನಪಾಗಿ ಅಡಂಬರವೆ ಬದುಕಾಗಿ ಬಿಟ್ಟಿದೆಯಲ್ಲ ಎನ್ನುವ ವಿಚಾರ ಅವನ ಸೋಶಿಯಲಿಸ್ಟ್ ತಲೆಯಲ್ಲಿ ಹುಟ್ಟಿದೆ. ಕೆಲವರು ಕಷ್ಟ -ಸುಖಗಳಲ್ಲಿ ಬದುಕಿನ ಅರ್ಥ ಹುಡುಕಿಕೊಂಡರೆ ಈ ಮಂದಿ ವೈಭವದಲ್ಲಿ ಬದುಕಿನ ಸಾರ್ಥಕತೆಯನ್ನು ಹುಡುಕುತ್ತಿದ್ದಾರೆ…. ಹೀಗೆ ಇಂತಹದ್ದೆ ನಡುಗೆಯಲ್ಲಿ ಬೇರೆ ಬೇರೆ ವಿಚಾರಗಳು ಅವನ ತಲೆಯಲ್ಲಿ ಆಲೋಚನೆಗಳು ಬೆಳವಣಿಗೆ ಪಡೆದುಕೊಳ್ಳುತ್ತವೆ.
ಅಲ್ಲಿಂದ ಎರಡು ಹೆಜ್ಜೆ ಮುಂದಿಟ್ಟಿರಲಿಲ್ಲ ಯಾವಾಗಲೂ ಬೆಸೆಂಟ್ ಮತ್ತು ಕೆನರಾ ಕಾಲೇಜಿನ ಮಕ್ಕಳಿಂದ ತುಂಬಿ ಹೋಗುತ್ತಿದ್ದ ಬೆಸೆಂಟ್ ನಿಲ್ದಾಣದಲ್ಲಿ ಬೆರಳೆಣಿಕೆಯ ಮಂದಿಯಿದ್ದರು. ನಿಲ್ದಾಣದ ಕಲ್ಲು ಬೆಂಚಿನ ಹಿಂದೆ ಕಣ್ಣು ಕಳೆದುಕೊಂಡ ವೃದ್ಧನೊಬ್ಬ ಮೊಣಕಾಲಿಗೆ ಕೈಯನ್ನು ಕಟ್ಟಿಕೊಂಡು ಮುಂದೆ-ಹಿಂದೆ ಓಲಾಡುತ್ತಿದ್ದ. ಕೊಳೆಯಲ್ಲಿ ಕಪ್ಪಾಗಿತ್ತು ಅವನ ಬಟ್ಟೆ. ಸಣ್ಣ ಬಟ್ಟೆಯ ಕಟ್ಟೊಂದು ಅವನ ಪಕ್ಕದಲ್ಲಿತ್ತು. ಅವನ ಮನಸ್ಸು ವೃದ್ಧನ ಬಗ್ಗೆ ಯೋಚಿಸಲು ಶುರು ಹಚ್ಚಿತ್ತು. ಎಲ್ಲಿ ಉಣ್ಣುವನೋ? ಎಲ್ಲಿ ಮಲಗುವನೋ? ನಿತ್ಯ ಕರ್ಮಗಳೆಲ್ಲೋ? ಹೀಗೆ…. ಜನರೆಲ್ಲಾ ಅವರವರ ಲೋಕದಲ್ಲೇ ತುಂಬಿ ಹೋಗಿದ್ದರು. ಪೈ ಕನ್ವೆನ್ಶನ್ ಹಾಲ್ ಕೂಡಾ ವೈಭೋಗದ ಕಾರ್ಯಕ್ರಮದಲ್ಲಿ ಮುಳುಗಿತ್ತು. ಈ ವೃದ್ಧ ಅವರ ಯಾರದ್ದು ಲೋಕಕ್ಕೆ ಪ್ರವೇಶವಿರದೆ ಜನನಿಬಿಡ ನಗರದಲ್ಲಿ ಒಂಟಿಯಾಗಿ ಕಳೆದುಹೋಗಿದ್ದ. ಶೂನ್ಯದಲ್ಲಿ ಅವನ ನೋಟ ನೆಟ್ಟಿತ್ತು. ಸದ್ದುಗಳೊಂದೆ ಅವನೊಡನೆ ಸಂವಾದಿಸುತ್ತಿತ್ತು. ಅದೇ ಅವನ ಏಕತಾನತೆಯನ್ನು ಮುರಿಯಲು ಅವನ ಕೈ ಹಿಡಿದಂತಿತ್ತು.
ಪುಣ್ಯ! ಹೆಚ್ಚಾಗಿ ಹುಡುಗಿಯರಿಂದ ತುಂಬಿರುತ್ತಿದ್ದ ನಿಲ್ದಾಣದಲ್ಲಿ ಈ ದಿನ ತನ್ನನ್ನು ಯಾವ ಹುಡುಗಿಯು ಕಿಚಾಯಿಸುವ ಸಾಧ್ಯತೆಯಿಲ್ಲವೆಂದು ನಿಟ್ಟುಸಿರು ಹೊರಚೆಲ್ಲಿದ. “ಕೊಟ್ಟಾರ, ಕೂಳೂರು, ಬೈಕಂಪಾಡಿ, ಹೊನ್ನಕಟ್ಟೆ-ಕುಳಾಯಿ, ಸುರತ್ಕಲ್……. ” ಫುಟ್ಭೋರ್ಡಿನಲ್ಲಿ ನಿಂತ ಕ್ಲೀನರ್ ಹರಕಲು ದ್ವನಿಯಲ್ಲಿ ಬೊಬ್ಬೆ ಹಾಕಿ ಜನರನ್ನು “ಬೇಗ ಬಲೆ” ಎಂದು ತುಳುವಿನಲ್ಲಿ ಕರೆಯುತ್ತಲೆ ಹಿಂದೆ ತಮ್ಮದೆ ರೂಟಿನ ’ಸಿಟಿ ಬಸ್ಸು ಬರುವುದನ್ನು ಕಂಡು ರೈಟ್………. ರೈಟ್……… ಎನ್ನುತ್ತಾ ಒಂದು ಗಳಿಗೆ ಆ ವಾತಾವರಣದಲ್ಲಿ ಉದ್ವೇಗವನ್ನು ಉಂಟು ಮಾಡಿದ. ಬಸ್ಸು ಗೇರ್ ಬದಲಿಸುವ ಸದ್ದು ಮಾಡುತ್ತಾ ದೂರ ದೂರವಾಯಿತು ಸ್ಪರ್ಧೆಯ ಬದುಕಿಗೆ ಹೆಜ್ಜೆಯಿಡುತ್ತಾ.
ಮಂಗಳೂರಿನಲ್ಲಿ ಪ್ರೈವೇಟ್ ಬಸ್ಸುಗಳದ್ದೆ ಒಂದು ದೊಡ್ಡ ಜಾತ್ರೆ, ಒಂದು ದಿನ ಬಸ್ಸು ಬಂದ್ ಏನಾದರಾದರೆ ಜಾತ್ರೆ ಮುಗಿದ ಮರುದಿನ ಖಾಲಿ ಬಿದ್ದ ನೆಲದ ಹಾಗೆ, ಮೇಕಪ್; ಅಭರಣ ಕಳಚಿಟ್ಟು ಉತ್ಸಾಹ ಕಳೆದುಕೊಂಡ ಸುಂದರಿಯ ಹಾಗೆಂಬುದು ಅವನ ಅಂಬೋಣ. ಗಾಬರಿ ಬೀಳಿಸುವ ಹಾರ್ನಿನ ಸದ್ದಿಲ್ಲದ ಖಾಲಿ ರಸ್ತೆಗಳು, ಜನರನ್ನು ಕರೆಯುವ, ಕ್ಯಾನ್ವಸ್ ಮಾಡುವ ಕಂಠಗಳ ಸದ್ದಿಲ್ಲದೆ ಎಲ್ಲವೂ ನಿಸ್ತೇಜವಾಗಿ ಕಾಣುವುದು ಸುಳ್ಳಲ್ಲ. ಇಲ್ಲಿಯ ಜನ ಜೀವನ ಜತೆ ಇದು ಕೂಡಾ ಹಾಸು ಹೊಕ್ಕಿದೆಯೆನ್ನುವುದಕ್ಕೆ ಬಂದ್ ನಡೆದ ದಿನ ಅಸ್ತವ್ಯಸ್ತವಾಗುವ ಜನ ಜೀವನವೇ ಸಾಕ್ಷಿ.
ದಾರಿಯಲ್ಲಿ ನಡೆಯುತ್ತಿದ್ದ ಜೋಡಿಯೊಂದು ತನ್ನ ಪ್ರಿಯಕರನ ಯಾವುದೋ ಮಾತಿಗೆ ಕಿಸಕ್ಕನೆ ನಕ್ಕು ನಡೆದು ಹೋಗುತ್ತಿತ್ತು. ಇಷ್ಟು ಬಸ್ಸಿದ್ದರೂ ನಾನು ಒಂಟಿ ಭೂತದ ಹಾಗೆ ನಡೆಯುವುದನ್ನು ಯಾರಾದರೂ ಪರಿಚಯದವರು ನೋಡಿದರೆ “ಆಯೇಗ್ ಮರ್ಲ್ ಮಾರಾಯರೆ”(ಅವನಿಗೆ ಹುಚ್ಚು) ಎಂದು ಹೇಳಬಹುದಾದ ಬಗ್ಗೆ ಅವನಲ್ಲಿ ಕಳವಳವಿತ್ತು. ಅದನ್ನೆಲ್ಲಾ ಮೀರಿದ ವಿಚಾರವೆಂದರೆ ಈ ಮಂಗಳೂರಿನ ಬೀದಿಯಲ್ಲಿ ನಡೆಯುವುದೆಂದರೆ ಅವನಿಗೆ ಸಿಗುವ ವಿಚಿತ್ರವಾದ ಸಂತೋಷ. ಹೀಗೆ ನಡೆದುಕೊಂಡು ಏನನ್ನೊ ಹೊಳೆಯಿಸಿಕೊಂಡು ಅದು ಮಾಡಬೇಕು ಇದು ಮಾಡಬೇಕೆಂದು ಮನಸಿನಲ್ಲಿ ಕನವರಿಸುವುದು ಕೂಡಾ. ನಡು ನಡುವೆ ಬರುತ್ತಿದ್ದ ಫೋನ್ ಕರೆಗಳು ಅವನ ಏಕಾಂತದ ನಡುಗೆಗೆ ಭಂಗ ತರುತ್ತಿತ್ತು. ಧ್ಯಾನದಂತಹ ನಡುಗೆಯನ್ನು ಕೆಡವುತ್ತಿತ್ತು.

ಜೋತಿ ಸಿನಿಮಾ ಮಂದಿರ
ಪಿ.ವಿ.ಎಸ್, ಬಂಟ್ಸ್ ಹಾಸ್ಟೆಲ್ ದಾಟಿ ಜ್ಯೋತಿ ಸರ್ಕಲಿನ, ಜ್ಯೋತಿ ಟಾಕೀಸಿನ ಮುಂದಿನ ಫುಟ್ಪಾತಿನಲ್ಲಿ ನಿಂತುಕೊಂಡ. ಭಾವುಟಗುಡ್ಡೆಯಿಂದಿಳಿದು ಬರುತ್ತಿದ್ದವು ವಾಹನಗಳು. ಸಿನಿಮಾ ಟಾಕೀಸಿನ ಒಳಗಿನಿಂದ ಹೊಡೆದಾಟದ ಸದ್ದು ಹೊರಗೂ ಕೇಳಿಸುತ್ತಿತ್ತು. ಬಸ್ಸಿನಲ್ಲಿ ದುಡಿಯುತ್ತಿದ್ದ ದಿನಗಳು ನೆನಪಾದವು. ಸಿಗ್ನಲಿನಲ್ಲಿ ಕೆಲವು ವಾಹನಗಳು ಸಿಕ್ಕಿ ಬಿದ್ದು ಗುರಾಯಿಸುತ್ತಿದ್ದವು. ಕಣ್ಣಳತೆಯ ದೂರದಲ್ಲಿ ನೇತ್ರಾವತಿ ಬಿಲ್ಡಿಂಗಿನಾಚೆ ಬಲ್ಮಠ ಪೆಟ್ರೋಲ್ ಪಂಪು ಕಾಣಿಸುತ್ತಿತ್ತು. ಇದೆಲ್ಲಾ ಹಳೆ ಪಳೆಯುಳಿಕೆಗಳಂತೆ ಅವನ ಮನಸ್ಸಿನಲ್ಲಿರುವ ಕ್ಷೇತ್ರಗಳು. ಪ್ರತಿಸಲ ಇಲ್ಲಿ ಬರುವಾಗಲೆ ಅವನಿಗೆ ಆ ದಿನಗಳೊಂದಿಗೆ ಅವನು ಕಾಡುತ್ತಾನೆ;ನೆನಪಾಗುತ್ತಾನೆ. ಆತ ಈಗೆಲ್ಲಿರುವನೋ?!
ಅವನೆಂದರೆ ಬೇರೆಯಾರಲ್ಲ ಚಂದ್ರ. ಜಯಚಂದ್ರ. ಪಿ.ಯು.ಸಿ ಕಲಿತ್ತಿದ್ದಾನಂತೆ. ಊರು ಉತ್ತರ ಕರ್ನಾಟಕದ ಯಾವುದೋ ಸಣ್ಣ ಹಳ್ಳಿ. ಕುಳ್ಳಗೆ ಕಪ್ಪಾಗಿದ್ದ ಆತ ಮೊದಲು ಬಸ್ಸಿಗೆ ಬಂದಾಗ ಬಡತನದ ದ್ಯೋತಕವಾಗಿ ಖಾಲಿ ಕಾಲುಗಳಿದ್ದವು. ಎರಡು ಜೊತೆ ಮಾಸಿದ ಬಟ್ಟೆಗಳಿದ್ದವು. ಕಣ್ಣಿನಲ್ಲಿ ಅಸಹಾಯಕತೆ ತುಂಬಿದ ನೋವಿತ್ತು. ಆಗ ಇವನು ಅದೇ ಕಂಪೆನಿಯ ಇನ್ನೊಂದು ಬಸ್ಸಿನಲ್ಲಿ ಲೈಸನ್ಸ್ ಇಲ್ಲದ ಕಂಡಕ್ಟರ್ ಆಗಿದ್ದ.

ಮಂಗಳೂರಿನಲ್ಲಿ ಬಸ್ಸುಗಳು
ಮೊದಮೊದಲಿಗೆ ಜಾಕ್, ಲಿವರ್, ಜಾಯಿಂಟ್ ಅಂದರೇನೆಂದು ಗೋತ್ತಿರದ ವ್ಯಕ್ತಿ ಆ ಕೆಲಸಕ್ಕೆ ಹೊಂದಿಕೊಳ್ಳತೊಡಗಿದ್ದ. ಎಲ್ಲಿಗೆ ಗ್ರೀಸ್ ಹೊಡಿಬೇಕು? ಎಲ್ಲಿ ವ್ಯಾಕಮ್ ಬೆಳಗ್ಗೆ ತೆಗೆಯಬೇಕೆಂದು ತಿಳಿಯದವನು ನಿನ್ನೆ-ಮೊನ್ನೆ ಕ್ಲೀನರಾಗಿ ಡ್ರೈವರಾದವನ ಬಾಯಿಯಲ್ಲಿ ಬೈಗುಳಗಳನ್ನು, ಮನಸ್ಸಿಗೆ ಹಿಂಸೆ ತರಿಸುವ ಮಾತುಗಳನ್ನು ಕೇಳಬೇಕಿತ್ತು. ಕರುಣೆಯಿಲ್ಲದವನು ಮುಗಿಯಲಾರದಂತೆ ಕೆಲಸವನ್ನು ಹೇರಿ ಬಿಡುತ್ತಿದ್ದ. ಅವನ ಬಾಯಿಯಲ್ಲಿ ಬೇಡದ ಮಾತುಗಳನ್ನು ಕೇಳುತ್ತಿದ್ದ. ಆಗೆಲ್ಲಾ ಇವನ ತಲೆಯಲ್ಲಿ ಓಡುತ್ತಿದ್ದ ಆಲೋಚನೆಯೆಂದರೆ ಈ ಎಲ್ಲಾ ಅವ್ಯಾಚ ಶಬ್ದಗಳನ್ನು ಬಸ್ಸಿನ ಸಿಬ್ಬಂದಿಗಳೇ ಸೃಷ್ಟಿಸಿರಬೇಕೆಂದು, ಇಲ್ಲದಿದ್ದರೆ ಇಂತಹ ಮಾತುಗಳು ಅಷ್ಟು ಸುಲಭವಾಗಿ ಅವರ ಬಾಯಿಯಲ್ಲಿ ಬರಲು ಸಾಧ್ಯವಿಲ್ಲವೆಂಬುದಾಗಿ.
ಚಂದ್ರ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ. ಇವನಿಗಿಂತ ದೊಡ್ಡವನಾಗಿದ್ದರೂ ಮರ್ಯಾದೆಪೂರ್ವಕವಾಗಿ ಸಂಭೋದಿಸುತ್ತಿದ್ದ. ನಗರದ ಜೀವನಕ್ಕೆ ಬೇಕಾದ ಕಪಟ, ವಂಚನೆಗಳ ನಯ ನಾಜೂಕಿನ ಮಾತುಗಳು ಲವಲೇಶವೂ ಅವನಲ್ಲಿರಲಿಲ್ಲ. ದೊಡ್ಡದಾದ ಸ್ವರವೂ ಕೂಡಾ ಅವನ ಗಂಟಲಿನಿಂದ ಬರುತ್ತಿರಲಿಲ್ಲ. ಇಂತಹ ವ್ಯಕ್ತಿ ಪ್ರತಿ ಸಲ ಇಂತಹದ್ದೇ ದಿನಚರಿಗಳಿಂದ ಚಂದ್ರ ಕುಗ್ಗಿ ಹೋಗುತ್ತಿದ್ದ. ಕಣ್ಣಿನ ತುಂಭಾ ನೀರು ತುಂಬಿಕೊಂಡು, ಮಣಿಪಾಲದಲ್ಲಿ ರೆಸ್ಟ್ ಟೈಮ್ನಲ್ಲಿ ಬಸ್ಸು ನಿಲ್ಲಿಸಿದಾಗ ಹಿಂದಿನ ಸೀಟಿನಲ್ಲಿ ಮುಗ್ಧವಾಗಿ ನಿದ್ದೆ ಹೋಗುತ್ತಿದ್ದ. ಮತ್ತೆ ನಿರಾಳವಾದವನಂತೆ ಪ್ರತ್ಯಕ್ಷವಾಗುತ್ತಿದ್ದ. ಹೀಗೆ ನಿದ್ದೆ ಹೋಗುವ ಮೊದಲು ಡ್ರೈವರನಿಗೆ ಬೆಡ್ ಶೀಟ್ ಹಾಸಿ, ತಲೆ ದಿಂಬಿಟ್ಟು ಕಾಲು ಒತ್ತುವುದು ಅವನು ಡ್ರೈವರಗೆ ಹಗಲು ರಾತ್ರಿ ಮಾಡಬೇಕಾಗಿದ್ದ ಇತರೆ ಕೆಲಸವಾಗಿತ್ತು. ಇದೊಂದು ರೀತಿಯ ಗುಲಾಮಗಿರಿಯನ್ನು ಕೆಲಸ ಕಲಿಸುವ ನೆಪದಲ್ಲಿ ಡ್ರೈವರ್ ಹುಟ್ಟುಹಾಕಿದ್ದ.
ಅದೇ ಕಂಪೆನಿಯ ಬೇರೆ ಬಸ್ಸಿನಲ್ಲಿದ್ದ ಇವನು ಚಂದ್ರನಲ್ಲಿ ಹೇಳುತ್ತಿದ್ದ… “ನಿನಗ್ಯಾಕೆ ಮಹರಾಯ ಈ ಕೆಲಸ, ಅಂತೂ ಪಿ.ಯು.ಸಿ ಮಾಡಿದ್ದಿಯಾ ಬೇರೆ ಕೆಲಸ ನೋಡುವುದಕ್ಕೆ ಆಗುವುದಿಲ್ಲವೆನೂ? ಯಾಕೆ ಇವರ ಕೈಯಲ್ಲಿ ಕೇಳಿಸಿಕೊಳ್ಳುತ್ತಿ” ಎಂದು. ಆಗೆಲ್ಲಾ ನಕ್ಕು ಟಯರ್, ಡಿಸ್ಕ್ ಬಿಚ್ಚಿಟ್ಟಂತೆ ಇಲ್ಲಾರೀ ಡ್ರೈವಿಂಗ್ ಕಲಿತು ಯಾವೂದಾದರೂ ಲಾರಿಯಲ್ಲಿ ಡ್ರೈವರಾಗಿ ಹೋಗಬೇಕೆಂಬ ಕನಸನ್ನು ಬಿಚ್ಚಿಡುತ್ತಿದ್ದ. ಜನರ ಬಾಯಿಯಲ್ಲಿ ಛೀ!ಥೂ! ಎನಿಸಿಕೊಳ್ಳುವ ಕೆಲಸದಲ್ಲೂ ಅವನ ಕನಸು ಕೊಳೆತಿರಲಿಲ್ಲ. ಅರಳುತ್ತಿತ್ತು. ಊರಲ್ಲಿ ಬಡತನವೆಂದರೂ ಅದು ಯಾವ ಸ್ವರೂಪದೆನ್ನುವುದನ್ನು ಹೇಳುತ್ತಿರಲಿಲ್ಲ. ಇವನು ಕೇಳುತ್ತಿರಲಿಲ್ಲ. ಅವರ ನಡುವೆ ಮಾತುಕತೆಯಲ್ಲಿ ಅದರ ಅಗತ್ಯ ಕೂಡಾ ಇರಲಿಲ್ಲ.
ಸಮಯ ಕಳೆದು ಹೋಗುತ್ತಿತ್ತು. ಬಸ್ಸಿನ ಹೊಸ ಟಯರ್ ಹಳೆಯದಾಗಿದ್ದವು. ಇವನನ್ನು ನಿರ್ವಾಹಕನಾಗಿ ಸರ್ವೀಸ್ ಬಸ್ಸಿಗೆ ಕಳುಹಿಸಲಾಯಿತು. ಚಂದ್ರ ವೇಗಧೂತದಲ್ಲೇ ಉಳಿದಿದ್ದ. ಮಂಗಳೂರು-ಮಣಿಪಾಲದ ನಡುವಿನ ಹಾದಿಯನ್ನು ಕೆಲವು ಸಲ ಕ್ರಮಿಸಿದ. ಈ ನಡುವೆ ಅವರ ಭೇಟಿ ತಪ್ಪಿತ್ತು. ಅವನು ವೇಗದ ಬದುಕಿಗೆ ಸ್ವಲ್ಪ ಹೊಂದಿಕೊಂಡಂತೆ ಕಾಣಿಸುತ್ತಿತ್ತು. ಆದರೂ ಕಟ್ಟಿಕೊಂಡ ಕನಸಿನ ಹತ್ತಿರ ಬರಲೂ ಸಾಧ್ಯ ಅವನಿಗಾಗಿರಲಿಲ್ಲ. ಕಾಲೂ ಒತ್ತಿಸಿಕೋಳ್ಳುತ್ತಿದ್ದ ಚಾಲಕ ಸ್ಟೇರಿಂಗ್ ಮುಟ್ಟಲೂ ಅವನನ್ನು ಬಿಟ್ಟಿರಲಿಲ್ಲ. ಅದನ್ನು ಒರೆಸುವುದರಲ್ಲಿಯೆ ದಿನ ಕಳೆದು ಹೋಗಿತ್ತು.
ಅವನು ಮತ್ತೆ ವೇಗಧೂತಕ್ಕೆ ಹಿಂತಿರುಗಿ ಬಂದಿದ್ದ. ಬಂದ ಎರಡು ದಿನದಲ್ಲೇ ಚಂದ್ರ ಇವನ ಕ್ಲೀನರ್ ಇಲ್ಲದ ಬಸ್ಸಿಗೆ ಕ್ಲೀನರಾಗಿ ಬಂದ ಆ ಬಸ್ಸಿಗೆ ಬೇರೆ ಕ್ಲೀನರನ್ನು ವ್ಯವಸ್ಥೆ ಮಾಡಿ. “ಪ್ರಸಾದ್ ಡ್ರೈವಿಂಗ್ ಸ್ಕೂಲಿಗೆ ಸೇರಿದೆನೆಂದ” ಈತ “ಒಳ್ಳೆಯದಾಗಲಿಯೆಂದ”.
ಅವನಿಗಿದ್ದಿದ್ದು ಬರೆ ಎಪ್ಪತ್ತೈದು ರೂಪಾಯಿ ಸಂಬಳ. ಇನ್ನೊಂದು ಬಸ್ಸಿನಲ್ಲಿರುವಾಗ ನಿರ್ವಾಹಕನ ಲೆಕ್ಕದಲ್ಲಿ ಮಧ್ಯಾಹ್ನದ ಊಟವೊಂದು ಸಿಗುತ್ತಿತ್ತು. ಈ ಲೋಕದಲ್ಲಿ ಎಲ್ಲಾ ದುಡಿಸಿಕೊಳ್ಳುವವರೆ ದುಡಿಯುವವರ ಬಗ್ಗೆ ಯೋಚಿಸುವವರು ಯಾರೂ ಇಲ್ಲ. ಸಾಯಂಕಾಲ ಮುನ್ನೂರು – ನಾಲ್ಕುನೂರು ತೆಗೆದುಕೊಂಡು ಹೋಗುವ ನಿರ್ವಾಹಕರು ಹೆಣ್ಣಿಗೆ, ಹೆಂಡಕ್ಕೆ ಬೇಕಾದರೆ ಹಣ ಸುರಿಯ ಬಲ್ಲರು ಆದರೆ ತಮ್ಮ ಜೊತೆ ದುಡಿಯುವವನಿಗೆ ಹತ್ತು ರೂಪಾಯಿ ಜಾಸ್ತಿ ಕೊಡಲು ಸಿದ್ಧರಿಲ್ಲವೆಂದು ಹಲವಾರು ಸಲ ಇವನು ಚಂದ್ರನ ಮುಂದೆ ಬೈದಿದ್ದಾನೆ. ಆದರೆ ಆ ರೀತಿಯ ಹಣಕ್ಕಾಗಿ ಎಂದೂ ಆತ ಆಸೆ ಪಡಲಿಲ್ಲ.
* * * * *
ಆ ದಿನ ಬೆಳಗ್ಗಿನಿಂದ ದುಡಿದು ಖಾಲಿ ಹೊಟ್ಟೆಯಲ್ಲಿ ಹಸಿದ ಬಸ್ಸು ಪಂಪಿನಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿತ್ತು. ಅವನು ಹಣ ಲೆಕ್ಕ ಮಾಡುತ್ತಾ ಇವತ್ತು ಎಷ್ಟು ಉಳಿಯಬಹುದೆಂಬ ಲೆಕ್ಕಚಾರದಲ್ಲಿದ್ದ. ರಸ್ತೆ ಬದಿಯ ಕಂಬಗಳಲ್ಲಿ ಬೆಳಕು ಅರಳಿಕೊಂಡಿದ್ದವು. ಆ ಕತ್ತಲು ಒಂದು ರೀತಿಯ ಆಮಲನ್ನು ಕುಡಿಯದೇನೆ ಹುಟ್ಟಿಸುತ್ತಿತ್ತು. ಚಂದ್ರ ಟೈರ್ ಬಡಿದು ನೋಡಿ, ಸೆಟ್ ಪರಿಶೀಲಿಸುವುದರಲ್ಲಿ ಮಗ್ನನಾಗಿದ್ದ. ಡಿಸೀಲ್ ಮತ್ತು ಪೆಟ್ರೋಲಿನ ವಾಸನೆ ಮೂಗಿಗೆ ಅಡರಿಕೊಳ್ಳುತಿತ್ತು. ಬೈಕಿನಲ್ಲಿ ತಬ್ಬಿಕೊಂಡು ಬಂದು ಪೆಟ್ರೋಲ್ ಹಾಕಿಸಿಕೊಂಡು ಹೋದ ಜೋಡಿಯನ್ನು ನೋಡಿ ಪಂಪಿನ ಯುವಕರು ಪೋಲಿ ಜೋಕಿನ ಮಾತುಕತೆಯನ್ನು ಆರಂಭಿಸುತ್ತಾ ಬಸ್ಸಿನಲ್ಲಿ ದುಡಿಯುವವರ ಅದೃಷ್ಟಕ್ಕೆ ಕುರುಬ ತೊಡಗಿದರು.

ಬಲ್ಮಠ ಪೆಟ್ರೋಲ್ ಪಂಪ್
ಎಂದಿನಂತೆ ದಿನದ ಕಲೆಕ್ಷನ್ ಕಟ್ಟಲು ಆಫೀಸ್ ತೆರೆದಿರಲಿಲ್ಲ. ಮುಚ್ಚಿತ್ತು. ಬಸ್ಸಿನ ಮಾಲಕನೆನಿಸಿಕೊಂಡ ಅಸಾಮಿ ಅಲ್ಲಿಯವರೆಗೆ ಎಲ್ಲಿದ್ದನೋ?! ಬಂದವನೆ ಚಂದ್ರನನ್ನು ಕರೆದು ಮಾತು ಗೀತು ಏನೂ ಇಲ್ಲದೆ ಒಂದೇ ಸವನೆ ಹೊಡೆಯತೊಡಗಿದ್ದ. “ನಿನ್ನ ಅಪ್ಪನ ಬಸ್ಸು ಅಂತಾ ಇದಕ್ಕೆ ಬಂದಿದ್ದೀಯಾ? …… ಯಾರ ಹತ್ತಿರ ಕೇಳಿದೆ? ಎನ್ನುವ ಜೋರು ಮಾತನ್ನು ಕೇಳಿ ಚಾಲಕನು, ಇವನು ಓಡಿದರು. ಚಂದ್ರ ನೆಲದಲ್ಲಿ ಮುರುಟಿಕೊಳ್ಳುತ್ತಿದ್ದ. ಒಂದೊಂದು ಪೆಟ್ಟುಗಳು ತಲೆ, ಮೂಗು, ಮುಖ, ಬೆನ್ನು ಎಲ್ಲೆಲ್ಲೋ ಬೀಳುತ್ತಿದ್ದವು. ಚಂದ್ರನ ಮೇಲೆ ಅಭಿಮಾನ ಬೆಳೆಸಿಕೊಂಡ, ರಕ್ಕಸನಂತಹ ಹೊಟ್ಟೆಯ ಚಾಲಕ ರಾಜೇಶನೂ ಮತ್ತು ಇವನು ಸ್ತಬ್ದರಾಗಿ ಬಿಟ್ಟಿದ್ದರು.
ಕೆಳಗೆ ಬಿದ್ದಿದ್ದವನನ್ನು ತಲೆಗೂದಲು ಹಿಡಿದು ಮೇಲೆತ್ತಿ ಬಸ್ಸಿನ ತಗಡಿಗೆ ತಲೆಯನ್ನು ಡಿಕ್ಕಿ ಹೊಡೆಸತೊಡಗಿದ. ಕ್ರೌರ್ಯದ ಪರಮಾವಧಿ. ಹಾಗೆ ಹೊಡೆಯುತ್ತಿದ್ದವನು ಸಮಾಜ ಮರ್ಯಾದೆ ಕೊಡುವ ಹಣವಂತನಾಗಿದ್ದ. ದುಡಿಯುವವರನ್ನು ನಿಕೃಷ್ಟವಾಗಿ ಕಾಣುವವನಾಗಿದ್ದ. ನಾಗರಿಕ ಸಮಾಜದ ಜನರೆಲ್ಲಾ ಮೂಕ ಪ್ರೇಕ್ಷಕರಾಗಿದ್ದರು. ಆ ರಾತ್ರಿಯೆ “ಹೋಗು ನಿನ್ನ ಮನೆಗೆ” ಎಂದು ಚಂದ್ರನನ್ನು ದಬಾಯಿಸತೊಡಗಿದ. ಚಂದ್ರ ಮಾತ್ರ “ಧಣಿ ಈ ರಾತ್ರಿ ನಾನು ಎಲ್ಲಿಗೆ ಹೋಗಲಿ? ಎಂದು ದೀನವಾಗಿ ಅಳುತ್ತಿದ್ದ ಅವನ ಸದ್ದು ರಸ್ತೆಯಲ್ಲಿ ಸಾಗುವ ವಾಹನಗಳ ಒಡೆದುಕೊಂಡ ಸದ್ದಿನೋಡನೆ ಬೆರೆತು ಹೋಗುತ್ತಿತ್ತು. ಚಾಲಕ ಮತ್ತು ನಿರ್ವಾಹಕರಿಬ್ಬರೂ ಅಸಹಾಯಕತೆಯಲ್ಲಿ ಬೆಂದರು.
ಯಾರೋ ಒಬ್ಬ ಪುಣ್ಯಾತ್ಮ “ಯಾಕ್ರೀ ಹೊಡೆಯುತ್ತಿದ್ದಿರಾ? ಎನ್ನುತ್ತಾ ಕಷ್ಟದಿಂದ ಪ್ರಶ್ನಿಸಿದ. ಇದು ನಮ್ಮ ವಿಷಯ ನಿಮಗೇನಿದೆ? ಎಂಡು ಪ್ರಶ್ನಿಸಿದ್ದೇ ತಡ ಜನರ ಗುಂಪು ವಿಸರ್ಜಿಸಲ್ಪಟ್ಟಿತ್ತು. ಚಂದ್ರ ಅಳುತ್ತಲೇ ಇದ್ದ. ಅವನ ಸಹೋದ್ಯೋಗಿಗಳು ನಿಂತಲ್ಲೇ ಕುಸಿಯುತ್ತಿದ್ದರು.
ಅವನೇನೂ ತಪ್ಪು ಮಾಡಲಿಲ್ಲವೆನ್ನುವುದು ಎಲ್ಲರಿಗೂ ಗೊತ್ತಿತ್ತು. ಪ್ರಶ್ನಿಸುವ ದೈರ್ಯ ಯಾರಿಗೂ ಇರಲಿಲ್ಲ. ಬಡವರಂತೆ ಕಾಣಿಸುವವರು ಇದ್ದವರ ಪಾಲಿಗೆ ಕಳ್ಳರೋ, ಸುಳ್ಳರೋ ಆಗಿ ಕಾಣಿಸುವ ಸಾಧ್ಯತೆಯೆ ಹೆಚ್ಚು. ಅದಲ್ಲದೆ ಯಾವ ಹೊತ್ತಿನಲ್ಲಿ ಹೇಗೆ ಬೇಕೋ ಹಾಗೆ ತಿರುಗಿಸಿದರೂ ಜನ ನಂಬುವುದು ಧನಿಕರನ್ನು. ಆ ದಿನ ಚಂದ್ರನನ್ನು ಕಳ್ಳನೆಂದರೂ ಜನ ನಂಬಿ ಬಿಡುತ್ತಿದ್ದರು! ಬಡವರಿಗೂ, ದುಡಿಯುವವರಿಗೂ ಸ್ವಾಭಿಮಾನವಿದೆ, ಅತ್ಮಾಬಿಮಾನವಿದೆ, ಅವರಿಗೂ ಈ ಜಗತ್ತಿನಲ್ಲಿ ಸಮಾನವಾದ ಸ್ಥಾನವಿದೆಯೆಂಬುದನ್ನು ಮರೆತು ಬಿಟ್ಟಂತಿತ್ತು ಆ ದಿನ. ಧನಿಕನ ಧರ್ಪ, ಅಹಂಗಳು ಬಡಪಾಯಿಯ ಮುಗ್ಧತೆಯನ್ನು ನುಂಗಿ ಹಾಕಿತ್ತು.
ಸಿಗ್ನಲಿನಲ್ಲಿ ನುಗ್ಗುತ್ತಿದ್ದ ಬಸ್ಸಿನ ಸದ್ದು ಮತ್ತೆ ಅವನನ್ನು ಈ ದಿನಕ್ಕೆ ತಂದಿತು. ಮತ್ತೆ ಸ್ವಲ್ಪ ಸಮಯ ಆ ಕಂಪೆನಿಯಲ್ಲಿ ಇದ್ದ ಚಂದ್ರ ಸ್ವಲ್ಪ ಸಮಯ ನಾಗರಾಜ ಶೆಟ್ಟರ “ಶ್ರೀ ಗಣೇಶ್” ನಲ್ಲಿದ್ದ. ನಂತರ ಇಂದಿಗೂ ಕಾಣುವುದಕ್ಕೆ ಸಿಗಲಿಲ್ಲ. ಇವೆಲ್ಲಗಳ ನಡುವೆ ಅವನ ಕನಸು ನನಸಾಗಿರಬಹುದು. ಈಗ ಯಾವುದಾದರೂ ಲಾಂಗ್ ಟ್ರಿಪ್ ಲಾರಿಯಲ್ಲಿ, ಹೆಗಲಿಗೆ ಬೈರಾಸು ಸುತ್ತಿಕೊಂಡು ಚಾಲಕನಾಗಿರಬಹುದು. ಬದುಕು ಮುಂದೆ ಚಲಿಸುತ್ತಿರಬಹುದು ಎಂದುಕೊಳ್ಳುತ್ತಾ ಅವನು ಬಾವುಟಗುಡ್ಡೆಯ ಕಡೆ ಹೆಜ್ಜೆ ಹಾಕತೊಡಗಿದ.
(ಚಿತ್ರ ಕೃಪೆ: www.google.com, http://www.dajjiworld.com)
Like this:
Like ಲೋಡ್ ಆಗುತ್ತಿದೆ...
ಈ ಮಾತ ನುಡಿದವರು