ಪ್ರೇಯಸಿಗೆ ಬರೆದ ಪತ್ರ – ಈಗ ಬರೀ ಶುಷ್ಕ

ಗೆಳತಿ,
ಈ ಮನಸ್ಸಿನ ರಾಜಬೀದಿಯಲ್ಲಿ ಚಿಗುರಿದ ಕನಸ್ಸಿನದ್ದೇ ಕಾರುಭಾರು. ನಿನ್ನ ನೋಟ ಹನಿಸಿದ ಒಲುಮೆಯ ಚಿಲುಮೆಗೆ ಒದ್ದೆಯಾಗಿದೆ ಮನ. ನಿನ್ನ ಕಂಗಳ ಉದ್ದಗಲದ ಆಳದಲ್ಲೂ ಹೊಳೆವ ಬಣ್ಣಗಳು ನನ್ನ ಕಣ್ಣಿಗೆ ಬಣ್ಣ ಹಚ್ಚಿ, ಕಂಗಳು ಸಾತತ್ಯದ ಮಿಲನಕ್ಕೆ ಹಾತೊರೆಯುತ್ತಿದೆ. ಪುರುಸೋತ್ತಿಲ್ಲದೆ ಸಾಗುವ ದಿನದ ಕ್ಷಣ -ಅನುಕ್ಷಣಗಳಲ್ಲೂ ನಿನ್ನಿರುವಿಕೆಯನ್ನು ಅವಾಹಿಸಿಕೊಂಡು .ಮನದ ಮೊಗಸಾಲೆಯಲ್ಲಿ ರೋಮಾಂಚನ, ನವಿರು ಕಂಪನಗಳು ಸುಯ್ದಾಡುತ್ತಿವೆ. ಎದೆಯಲ್ಲಿ ಹೊಸ ಪುಳಕಕ್ಕೆ ಕಾರಣವಾಗುತ್ತಿವೆ.
ಉಸಿರಾಗಿರುವವಳೇ, ನಿನ್ನ ಮುಂಗುರುಳ ಲಾಸ್ಯದ ತೊಯ್ದಾಟದಲ್ಲಿ ತಾದಾತ್ಮ್ಯತೆಯನ್ನು ಅನುಭವಿಸುತ್ತಾ ಮುಂಬರುವ ದಿನಗಳ, ಹೊಂಗನಸಿನ ಸೌಧವನ್ನು ಮನದಲ್ಲಿ ಸೃಜಿಸುತ್ತಿದ್ದೇನೆ.  ಮಾತಿಗಿಂತ ನಿನ್ನ ಮೌನ ಹೊರಡಿಸುವ ಮಾತುಗಳು ಜಡವಾದ ಭಾವಗಳನ್ನು ಕಲ್ಯಾಣಿರಾಗದಂತೆ ಅರಳಿಸಿ, ಕೆರಳಿಸಿ ರಾಗ ವಿಸ್ತಾರಕ್ಕಿಳಿಯುತ್ತಿವೆ. ಮಂದ್ರಕ್ಕೂ , ಸ್ಥಾಯಿಗೂ ಏರುವ ಉತ್ಕಟತೆಗೆ  ನಿನ್ನ ಮುಂಗುರುಳು ಕಾರಣವಾಗಿ ಅವುಗಳ ತೂಗಟವನ್ನು ದಿಟ್ಟಿಸುತ್ತಾ ಮೈ ಮರೆತಿದ್ದೇನೆ. ನಿನ್ನ ಕೆನ್ನೆಯ ರಾಗರಂಜಿತ ಬಣ್ಣದಲ್ಲಿ ತುಟಿಯ ಕೆಂಪಿನಲ್ಲಿ; ನುಣುಪಿನಲ್ಲಿ; ಹೆಜ್ಜೆ-ಗೆಜ್ಜೆಯಲ್ಲಿ , ನೀಳ ಮೂಗಿನ ಮೋಹಕತೆಯಲ್ಲಿ ನನ್ನ ಕನಸಿನ ಮೂಲಗಳ ದಿಟ್ಟಿಸಿದರೆ- ಅದು ನಿನ್ನಂತರಂಗದಲ್ಲಿದೆಯೆಂದು ಅನಿಸುತ್ತಿದೆ.
ಎಲ್ಲ ಬಚ್ಚಿಟ್ಟುಕೊಂಡ ಮನಸಿನಲ್ಲಿ, ಹಚ್ಚಿಟ್ಟ ದೀಪದ ಬೆಳಕಿನಂತೆ- ಹೊಸ ಬೆಳಕು- ಕಣ್ಗಳಿಗೂ, ಎದೆಯ ಗೂಡಿಗೂ.ಸ್ತಬ್ದ ಸರೋವರದಲ್ಲಿ ಅಲೆಯನ್ನು ಕಾಣ ತವಕಿಸಿ ನಿಂತ ನನ್ನಲ್ಲಿನ ಕೌತುಕಕ್ಕೆ; ನಿರೀಕ್ಷೆಗೆ ಹೊಸ ವರ್ಷವಾಗಿ ಅಲೆಗಳ ಝೇಂಕಾರವನ್ನು ಬಿಂದು ಬಿಂದುಗಳಿಂದ ತುಂಬಿಬಿಟ್ಟಿರುವೆ. ಇದು ಸಾಧ್ಯವಾಗಿದ್ದು ಹೇಗೆಯೆಂದು ಕನಸು- ನನಸುಗಳ ನಡುವೆ ನಿಂತು ಯೋಚಿಸುತ್ತಿರುವೆ. ರಾಡಿಯೆದ್ದ ಜಗದಲ್ಲಿ ಕಳೆದುಕೊಂಡ ಕನಸುಗಳ ಹಪಹಪಿಕೆಯಲ್ಲಿ ದಿಕ್ದೆಸೆಗಳು ಬರಿದಾದಂತೆ ಕಂಗೆಟ್ಟವನಿಗೆ ದಿಕ್ಕಾಗಿ ಬಂದೆ; ಬದುಕಾಗಿ ನಿಂತೆ.
ಪದಗಳು ಪದಗಳಾಗದೆ ಶಬ್ದದಾಚೆಗಿನ ಶೂನ್ಯದಲ್ಲಿ ಕರಗಿ, ಕಾರ್ಗತ್ತಲಲ್ಲಿ ಅವುಗಳ ಹುಡುಕಾಟ ನಡೆಸುತ್ತಿದ್ದವನಿಗೆ ಹೊಸ ಭಾವನೆಗಳ ಬೊಗಸೆಯಿಡೀ ತುಂಬಿ ಭಾವನಾ ಪ್ರಪಂಚಕ್ಕೆ ಹೊಸ ವ್ಯಾಪ್ತಿಯನ್ನು ಸೃಷ್ಟಿಸಿದೆ. ಈಗ, ದ್ವಂದ್ವಗಳ ಮೀರಿ ನೀನು ತೋರಿಸಿಕೊಟ್ಟ ಹೊಸ ಆಯಾಮವನ್ನು ಬದುಕಾಗಿ ಪರಿವರ್ತಿಸಿಕೊಳ್ಳುವ ಕಾಯುವಿಕೆಯಲ್ಲಿರುವೆ. ನನ್ನೊಲವೇ, ಅರೆ ಕ್ಷಣಿಕತೆಯ ಪಯಣದಲ್ಲಿ  ಈ ಜೀವ ನಿನ್ನನ್ನು ಪಯಣದ ಸಾಥಿಯಾಗಿ ಎದುರು ನೊಡುತ್ತಿದೆ. ಈಗಿಲ್ಲಿ, ಮಾತಿನ ನಡುವೆ ದಿಡೀರಾಗಿ ಹುಟ್ಟಿಕೊಳ್ಳುವ ಮೌನ ನೂರು ಮಾತುಗಳನ್ನು ಮಾತಿಲ್ಲದೆ ಹೇಳುತ್ತಿವೆಯೆಂದೆನಿಸುತ್ತಿದೆ.
ನೀರವ ಮೌನದ ನನ್ನೊಡಲಾಳಗೆ ನೀ ಬೀಸಿದ ತಂಗಾಳಿ ನೀರವತೆಗೆ ಶ್ರುತಿ ನೀಡಿದೆ. ಅರಳಿವೆ ಉಸಿರುಗಳು, ನಿಡಿದಾಗಿವೆ ಇರುಳುಗಳು, ಕಿರುವಾಗಿವೆ ಕ್ಷಣಗಳು ನಿನ್ನ ನಿರೀಕ್ಷೆ ಕಾಯುವಿಕೆಯಲ್ಲಿ.
ಹೊಸ ಮುನ್ನುಡಿ ಬದುಕಿಗೆ ಬರೆ ಭಾ ಗೆಳತಿ………
( ಇದು ಮೊದಲ ಪ್ರೇಮ ಪತ್ರನಾ? ನೆನಪಿಲ್ಲ. ಹಾಗಗಿರಲಿಕ್ಕಿಲ್ಲ. ಬಹುಶಃ ಎರಡು ಅಥವಾ ಮೂರನೆಯದ್ದು ಆಗಿರಬಹುದು. ಈಗ ಅಂದರೆ ಸಂಬಂಧಗಳು ಮುರಿದುಕೊಂಡ ಮೇಲೆ ಯಾಕೋ ಭಿನ್ನವಾಗಿ ಕಾಣುತ್ತಿದೆ ಈ ಪತ್ರ. ಬರೇ ರೂಪಕಗಳದ್ದೇ ಕಾರುಭಾರು ಅಥವಾ ಅರ್ಥವಾಗದಂತಹ ಭಾಷೆಯ ಬಳಕೆ ಸರಳವಾಗಿ ವ್ಯಕ್ತಪಡಿಸುವ ಪ್ರೀತಿಗೆ ಬೇಕಿತ್ತೆಯೆಂದು ಅನಿಸುತ್ತಿದೆ. ಕೆಲವೋಮ್ಮೆ ಮೆಚ್ಚಿಸಲೆಂದು ಬರೆದ ಪತ್ರದಂತೆ ಕಾಡುವಾಗ ಆಕೆಯಿದನ್ನೂ ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾಳೋ ಎನೋ ಎಂಬ ಆಲೋಚನೆಗೆ ಒಳಗಾಗುತ್ತೇನೆ. ತೆರೆದು ಓದುವಾಗ ಭಾವನೆಗಳು ಎಷ್ಟು ಶುಷ್ಕವಾಗಿ ಅಭಿವ್ಯಕ್ತಿಸಲ್ಪಟ್ಟಿದೆಯೆಂದು ಕಿರಿಕಿರಿಯಾಗುತ್ತದೆ. ನಿಮಗೇನನಿಸುತ್ತಿದೆ????!!!!)

%d bloggers like this: