ಆತ್ಮ ವಂಚನೆಯ ಪ್ರೇಮ ಕವಿತೆ
ಫೆಬ್ರವರಿ 13, 2011 2 ಟಿಪ್ಪಣಿಗಳು
after long time i am here with one of my poem. if this poem is not good then don’t hesitate to criticize… i eagerly waiting for u r response.
ಶಿಲುಬೆಯಲ್ಲಿ ಕರುಣೆಯನ್ನು
ತುಂಬಿಕೊಂಡ ಯೇಸು
ಇವರನ್ನೆಲ್ಲಾ ಕ್ಷಮಿಸಿ ಎಂದಿದ್ದು
ನಿನಗೆ ಈ ಚಾಪೆಲಿನ ಒಳಗೆ ನೆನಪಾಗಿರಬಹುದು.
ಆತ್ಮ ಪ್ರಜ್ಞೆ ಜಾಗೃತಗೊಂಡ ಕ್ಷಣ
ಮೊದಲು ಅವನನ್ನು ಪ್ರೀತಿಸಿದ್ದು
ತಪ್ಪೋ? ನಂತರ ನನ್ನನ್ನು?
ಗೊಂದಲ ನಿನಗೆ.
ಹಾರುವುದು ನದಿ-ದಡ
ಆಟದಲ್ಲಿ ಬದುಕಿನಲ್ಲಲ್ಲ.
ವಂಚನೆ
ನಡೆದುದನ್ನು ಹೇಗೆ ನೋಡಿದರೂ
ಆಗಿಯೇ ತೀರುತ್ತದೆ
ಜೀವ-ಆತ್ಮಗಳಿಗೆ ಮಾತ್ರವಲ್ಲ
ಬದುಕಿಗೂ.
ಅವನಿಲ್ಲದ ಹೊತ್ತಿನಲ್ಲಿ
ಒಬ್ಬರನ್ನೊಬ್ಬರು ವಂಚಿಸಿಕೊಂಡು
ಆದಮ್ಯ ಆಸೆಯ ಹೊತ್ತು ಸಾಗರ ಸೇರುವ ಅಳಿವೆಯಂತೆ
ಸುಖದ ದಿನಗಳನ್ನು ಸುಖವಾಗಿ ಸುಖಿಸಿದ್ದೇವೆ.
ಈಗವನು ಬಂದಾಗ
ನಾನು ಬೇಕೆನಿಸಿದರೂ ಬೇಡವಾಗಿ,
ನಿನಗಾಗಿಯೇ ಇರುವ ಹಪಹಪಿಕೆಯನ್ನು
ತಿರಸ್ಕರಿಸಿ ಶಿಲುಬೆಯ ಬೆನ್ನಲ್ಲಿ ಪ್ರೀತಿಯ ಬಚ್ಚಿಟ್ಟು-
ಘಂಟೆ ಬಾರಿಸುವ ಚಾಪೆಲಿನೊಳಗೆ
ಕರುಣಾಮಯಿ ಫಾದರಿನ ಮರೆಯಾಚೆಗೆ ಕುಳಿತು,
ಕನ್‍ಫೇಶನಿನ ಹೊತ್ತಿನಲ್ಲಿ ಪಿಸುಗುಟ್ಟುವ
ಪಾಪ ವಿಮೋಚನೆಯ ಮಾತುಗಳು-
ನನ್ನವನಿದ್ದಾಗಲೂ ಪರವಶಳಾಗಿ
ನಾನವನನ್ನು ಬಸಿದೆ; ಸುಖಿಸಿದೆ
ಕ್ಷಮಿಸಿಬಿಡು ಗುರುವೇ-
ಎಂದು ಕೇಳಿಕೊಂಡಾಗ.
ಪರಮ ದಯಾಮಯನ ಭಕ್ತನು
ಕ್ಷಮಿಸಿ ಕಳುಹಿಸಿರಲು
ನೀನವನ ಸಂಗದಲ್ಲಿರುವ ಹೊತ್ತಿನಲ್ಲಿ
ನಿನ್ನಂತರಂಗದಲ್ಲಿ ಮತ್ತೆ-ಮತ್ತೆ
ನನ್ನ ಕುರಿತ ಕಾಮನೆಗಳು ಸುರುಳಿ ಸುತ್ತುವಾಗ
ಇದು ಆತ್ಮವಂಚನೆಯಲ್ಲದೆ ಮತ್ತೇನು?
Kavite tumba chennagide
thank you