ಅವಳು ಸಾವನ್ನು ಎದುರಿಸಿದ್ದು ಹೀಗೆ

ಮಣ್ಣಿನ ಗೋಡೆಯ ಆ ಮನೆಯ ಕರಿ ಹಿಡಿದ ಅಡುಗೆಯ ಕೋಣೆಯಿಂದು ಸ್ತಬ್ದವಾಗಿದೆ. ಪಾತ್ರೆಗಳು ಮಲಗಿಕೊಂಡಿವೆ. ಗಪ್ಪನೆ ಕಣ್ಣಿಗೆ ರಾಚುವಂತೆ ಹರಡಿಕೊಂಡಿರುವ ಕಪ್ಪು ಕತ್ತಲೆ ವಿಚಿತ್ರ ಭಯ ಹುಟ್ಟಿಸುವ ರೀತಿಯಲ್ಲಿದೆ. ಮೂವತ್ತು ಅಡಿ ದೂರದಲ್ಲಿ ಕೊಂಕಣ ರೈಲ್ವೆಯ ಪಟ್ಟಿಯಲ್ಲಿ ಇನ್ನೂ ಮುಂಬಯಿಯಿಂದ ಮಂಗಳೂರಿಗೆ ಬರುವ ರೈಲು ಕೂಗು ಹಾಕುತ್ತಾ ಎಲ್ಲರನ್ನೂ ಎಬ್ಬಿಸುತ್ತಾ ಸಾಗುತ್ತಿದೆ. ಅದನ್ನೇ ಅಚ್ಚರಿಯಿಂದ ನೋಡುತ್ತಾ, ಅರೆ! ಟೈಮ್ ಆಯಿತಲ್ಲಾ ಎಂದು ಗಡಬಡಿಸುತ್ತಿದ್ದ ಆಕೆಯ ಪತ್ತೆಯಿರಲಿಲ್ಲ. ತೆಕ್! ತೆಕ್! ಎನ್ನುತ್ತಾ ನೀರು ಸೇದುತ್ತಿದ್ದ, ಕರಕರ ಸದ್ದು ಹುಟ್ಟಿಸುತ್ತಿದ್ದ ರಾಟೆಯಲ್ಲಿದ್ದ ಅಲ್ಲಲ್ಲಿ ಕಿತ್ತು ಹೋದ ಹಗ್ಗ ಕೂಡಾ ಆಕೆಯ ನೆನಪಿನಲ್ಲಿ ಕಂಗಲಾಗಿದೆ.

ಬೆಡ್ ರೂಮಿಲ್ಲದ ಆ ಮನೆಯ ಗಾಢ ಕತ್ತಲ ಕೋಣೆಯ ಮರದ ಟೇಬಲಿನಲ್ಲಿ ಆಕೆಯ ವಸ್ತುಗಳು ಅನಾಥವಾಗಿ ಹಾಗೆ ಬಿದ್ದುಕೊಂಡಿದೆ. ಬೇಕೆಂದರೂ ಆಕೆಯ ನೆನಪಿಗಾಗಿ ಒಂದು ಫೋಟೋ ಕೂಡಾ ಕಾಣುತ್ತಿಲ್ಲ. ಆಕೆ ಅದೃಶ್ಯವಾದ ದೇವತೆಯಂತೆ ಇದ್ದಕ್ಕಿದ್ದಂತೆ ಮತ್ತೆ ಬರಲಾರದ ಊರಿಗೆ ನಾಪತ್ತೆಯಾಗಿ ಹೋಗಿದ್ದಾಳೆ. ಆಕೆ ನಿರ್ಜೀವ ವಸ್ತುವಿಗೂ ಜೀವ ತುಂಬಿ ಬಿಡುವ ಶಕ್ತಿಯಿದ್ದವಳು. ಆಕೆಯಿಲ್ಲದೆ ಆ ಮನೆ ಕೂಡಾ ಈಗ ಕಳೆ ಕುಂದಿ, ನಿರ್ಜೀವವಾಗಿದೆ.

ಕರಿ, ಬಲೆ ಹಿಡಿದ ಮನೆಯನ್ನೆಲ್ಲಾ ಒಪ್ಪವಾಗಿ ಸಾರಿಸಿ, ದಡಬಡ ಸದ್ದಿನೊಂದಿಗೆ ಅದ್ಯಾವಾಗ ಕೆಲಸಗಳನ್ನೆಲ್ಲಾ ಮುಗಿಸುತ್ತಿದ್ದಳೆಂದು ಯಾರಿಗೂ ತಿಳಿಯದಂತೆ ಬೆಳಗನ್ನು ಎದುರುಗೊಳ್ಳುತ್ತಿದ್ದಾಕೆ ಕೊಂಕಣ ರೈಲ್ವೆಯಾದ ಮೇಲೆ ರೈಲಿನ ಕೂಗಿಗೆ ಎಚ್ಚರವಾಗುತ್ತಿದ್ದಳು. ಅದಕ್ಕಿಂತಲೂ ಮೊದಲು ಕೆಳಗಿನ ಮನೆಯ ಸದಾ ಜಗಳವಾಡುತ್ತಿದ್ದ ಕ್ರಿಶ್ಚಿಯನರ ಮನೆಯ ಅವಳ ಪಾಲಿನ ಬಾಯಮ್ಮನ ಮನೆಯ ಕೋಳಿಯ ಕೂಗಿನೊಂದಿಗೆ ಎಚ್ಚರವಾಗುತ್ತಿತ್ತು ಆಕೆಯ ಪಾಲಿನ ದಿನ. ಆಕೆ ಅಚೀಚೆ ನಡೆಯುವಾಗ ಉಂಟಾಗುತ್ತಿದ್ದ, ಮನೆಯ ಒಳ-ಹೊರಗೂ ಜೀವ ಕೊಡುತ್ತಿದ್ದ ನೈಟಿಯ ಸದ್ದು ಇನ್ನೂ ಅಲ್ಲಿದೆ ಎನ್ನುವಷ್ಟು ಕರಾರುವಕ್ಕಾಗಿ ಅವಳ ಬಗ್ಗೆ ಯೋಚಿಸುವಾಗ ನೆನಪುಗಳು ತುಂಬಿ ಬರುತ್ತವೆ ಅವನಿಗೆ.

ವರುಷಕ್ಕೋಮ್ಮೆ, ಬೇಸಿಗೆಯ ರಜಾ ದಿನದಲ್ಲಿ ದೂರದ ಬಾಳೆಹೊನ್ನೂರಿನಿಂದ ಪಡುಬಿದ್ರಿಯ ಸಮೀಪದ ಫಲಿಮಾರು ಎಂಬ ಊರಿನಲ್ಲಿರುವ ಅಜ್ಜಿ ಮನೆಗೆ ಬರುತ್ತಿದ್ದವನು ಆ ದಿನದಲ್ಲಿ ಆ ಕರಿ ಹಿಡಿದ ಮನೆಯೆಂದರೆ ತುಂಭಾ ಅಸಹ್ಯಪಟ್ಟುಕೊಳ್ಳುತ್ತಿದ್ದ. ಆ ಮನೆಯನ್ನು ನೆನೆಸಿಕೊಂಡು ಅಜ್ಜಿ ಮನೆಯ ಹಾದಿಯಲ್ಲಿಯೇ ಬರುವುದಿಲ್ಲವೆಂದು ಹಠಕ್ಕೆ ಬೀಳುತ್ತಿದ್ದ. ಕಷ್ಟಪಟ್ಟು ನಾಲ್ಕಾರು ದಿನವಿದ್ದು ಸನಿಹವಿದ್ದ ಅಕ್ಕನ ಮನೆಗೆ ಓಡುತ್ತಿದ್ದ. ಆ ಮನೆಯ ನೆನಪಿನೊಡನೆ ಪಕ್ಕನೆ ಅವನ ಕಣ್ಣ ಮುಂದೆ ನಿಲ್ಲುತ್ತಿದ್ದ ವಿಚಾರವೆಂದರೆ ಬೆಳಗ್ಗಿನ ತಿಂಡಿಯ ಬದಲು ಹಿಂದಿನ ದಿನದ ತಂಗಳವನ್ನು ಮಾವಿನ ಮಿಡಿಯ ಉಪ್ಪಿನಕಾಯಿಯೊಡನೆ ತಿನ್ನಬೇಕಾದ ಅನಿವಾರ್ಯತೆ. ಪ್ರತಿ ದಿನ ಯಾವೂದಾದರೂ ತಿಂಡಿಯೊಂದಿಗೆ ಶುರುವಾಗುವ ದಿನಚರಿಗೆ ಒಗ್ಗಿದ್ದ ಅವನಿಗೆ ಆ ವಾತಾವರಣ ಒಗ್ಗುತ್ತಿರಲಿಲ್ಲ. ಅದು ಅವರ ಬದುಕಿನ ರೀತಿಯೆಂದು ತಿಳಿಯುವ ವಯಸ್ಸು ಕೂಡಾ ಆಗ ಅವನದಾಗಿರಲಿಲ್ಲ.

ಆದರೂ, ಅವನನ್ನು ಆ ಮನೆಯಲ್ಲಿ ನಿಲ್ಲುವಂತೆ ಮಾಡುತ್ತಿದ್ದುದು ಆಕೆಯ ಪ್ರೀತಿ, ವಾತ್ಸಲ್ಯ. ಆಕೆ ಬೀಡಿ ಕಾರ್ಮಿಕೆಯಾಗಿದ್ದವಳು ಪ್ರತಿಸಲ ಕಟ್ಟಿದ ಬೀಡಿಯೊಂದಿಗೆ ಅಥವಾ ಬೀಡಿ ಕಟ್ಟುತ್ತಾಲೇ ಪೇಟೆಗೆ ಹೊರಟು ನಿಂತಾಗ ಆಕೆಯೊಡನೆ ಸವಾರಿ ಹೊರಟು ನಿಲ್ಲುತ್ತಿದ್ದ. ಕೆಲವೋಮ್ಮೆ ಪೇಟೆಗೆ ತಲುಪುವವರೆಗೂ ಆಕೆಯ ಬೀಡಿ ಕಟ್ಟಿ ಮುಗಿಯುತ್ತಲೇ ಇರಲಿಲ್ಲ. ಪೇಟೆಗೆ ಹೋಗುವ ಹಾದಿಯಲ್ಲಿ ಕರಾವಳಿಯ ಬಿಸಿಲು ಅವನ ಸೋಕದಿರಲೆಂದು ಕೊಡೆಯನ್ನು ಅರಳಿಸಿಕೊಟ್ಟು ಅದರೊಳಗೆ ನಡೆಯುವಂತೆ ಗದರಿಸುತ್ತಾ, ದಾರಿಯಲ್ಲೂ ಬೀಡಿಯನ್ನು ತಿರಿಗಿಸುತ್ತಾ ನಡೆಯುತ್ತಿದ್ದಳು ಅವನ ನೂರು ಪ್ರಶ್ನೆಗಳಿಗೆ ಬರೀ ಹೂಂ ಗುಟ್ಟುತ್ತಾ. ಬೀಡಿಯ ಬ್ರಾಂಚಿನಲ್ಲಿ ಈತ ನನ್ನ ಅಕ್ಕನ ಮಗನೆಂದು ನನ್ನನ್ನು ಎಲ್ಲರಿಗೆ ಪರಿಚಯಿಸಿ, ಈ ದಿನ ತನಗೆ ಸಾವಿರ ಕೆಲಸಗಳು ಭಾಕಿಯಿರುವಂತೆ ಬೀಡಿ ತೆಗೆಯುವವನೊಡನೆ ” ಬೇಗ ಬೀಡಿ ದೆಪ್ಪುಲೆ ಸಾಯಿಬೆರೆ” ಎಂದು ಸಂಭ್ರಮದಿಂದ ಅವಸರಿಸುತ್ತಿದ್ದಳು.

ಅವನು ಅವಳೊಡನೆ ಹೋಗಲು ಇಷ್ಟಪಡುತ್ತಿದ್ದುದಕ್ಕೆ ಕಾರಣವಿತ್ತು – ಅವಳು ತೆಗೆಸಿಕೊಡುತ್ತಿದ್ದ ಬಿಕೊಜಾ ಎಂಬ ಸಾಪ್ಟ್ ಡ್ರಿಂಕ್ಸ್ ಗಾಗಿ ಮತ್ತು ಚುಕ್ಕಿಯೆಂಬ ಕಡ್ಲೆ ಮಿಠಾಯಿಗಾಗಿ ಹಾಗೂ ಮನೆಯಲ್ಲಿ ಬೆಳಗ್ಗೆ ತಿಂಡಿಯೇನಾದರೂ ಮಾಡದಿರುತ್ತಿದ್ದರೆ ಸಿಗುತ್ತಿದ್ದ ಭಟ್ರ ಹೋಟೆಲಿನ ಗಟ್ಟಿ ಚಟ್ನಿ, ಇಡ್ಲಿಗಾಗಿ. ಈ ಕಾರಣಕ್ಕಾಗಿಯೆ ಪ್ರತಿಸಲ ಆಕೆ ಪೇಟೆಗೆ ಹೊರಟು ನಿಂತಾಗ ಅವಳೊಡನೆ ಹೋಗುವೆನೆಂದು ರಚ್ಚೆ ಹಿಡಿಯುತ್ತಿದ್ದ; ಪೆಟ್ಟು ಕೂಡಾ ತಾಯಿಯ ಕೈಯಲ್ಲಿ ತಿನ್ನುತ್ತಿದ್ದ. ಹಾಗೆಯೆ ಬೀಡಿಯ ಬ್ರಾಂಚಿನಿಂದ ವಾಪಾಸ್ಸು ಬರುವಾಗ ಸಾಲು ಸಾಲು ನಿಂತಿರುವ ಮಾವಿನ ಮರದ ತೋಪಿನಲ್ಲಿ ಬಿದ್ದ ಒಳ್ಳೆಯ ಮಾವಿನ ಹಣ್ಣುಗಳನ್ನು ತಿನ್ನಲು ಅಥವಾ ಮಾವಿನ ರಾಸಯನ ಮಾಡಲು ತರುತ್ತಿದ್ದಳು. ಒಟ್ಟಾರೆ ಆಕೆಗೆ ಅಕ್ಕನ ಮಕ್ಕಳು ಮನೆಗೆ ಬಂದರೆಂದರೆ ಹಬ್ಬ.

ಅವನ ಅಜ್ಜನ ಕಾಲುಗಳು ಮೊರಟೆ ಬಂದು ವಕ್ರ ವಕ್ರವಾದನಂತರ ದುಡಿಯುವುದನ್ನು ಬಿಟ್ಟು ಕೆಲವು ವರುಷಗಳು ಕಳೆದಿದ್ದವು. ಖರ್ಚು-ವೆಚ್ಚಗಳೆಲ್ಲಾ ಬೀಡಿಯ ಕೆಲಸವೆ ತೂಗಿಸಿಕೊಡಬೇಕಿತ್ತು. ಆಗೋಮ್ಮೆ- ಈಗೋಮ್ಮೆ ಮುಂಬಯಿಯಿಂದ ಮಾವ ಕಳಿಸಿಕೊಡುತ್ತಿದ್ದ ಹಣ ಭೂತ ಮಾಡುವುದಕ್ಕೋ, ತಂಬಿಲ ಮಾಡುವುದಕ್ಕೋ ಅಥವಾ ಗಡಿಯ ಆಹಾರಕ್ಕೋ, ಸತ್ಯ ನಾರಾಯಣ ಕತೆಗೋ ಸರಿಯಾಗುತ್ತಿತ್ತು. ಆ ಮನೆ ನಡೆಯುತ್ತಿದ್ದುದು ಮನೆಯ ಹೆಣ್ಮಕ್ಕಳಿಂದ. ಅವರೆ ಆ ಮನೆಯ ಅಘೋಷಿತ ಯಜಮಾನರು ಹಾಗು ಯಜಮಾನತಿಯರು. ಆದ್ದರಿಂದಲೇ ಅದೊಂದು ದಿನ ಇನ್ನೂ ಬೀಡಿಯಿಲ್ಲವಂತೆ ಎಂಬ ಪುಕಾರಿಗೆ ಆಕೆ ಬೆದರಿದ್ದು . ಟೀಚರರ ಆದರ್ಶದ ಮಾತು ಕೇಳಿ ಬೆಳೆದಿದ್ದ ಅವನು ಕೂಡಾ ಬೀಡಿ ಉದ್ಯಮವನ್ನು ನಿಲ್ಲಿಸಬೇಕೆಂದು ಅವಳ ಮುಂದೆ ಹೇಳಿದಾಗ ಅಮ್ಮ ಅವನ ಕುಂಡೆಗೆ ಬಳ್ಳಿಯೊಂದನ್ನು ಕಿತ್ತು ಹೊಡೆದಿದ್ದು ಯಾಕೆಂದು ಅವನಿಗೆ ಆಗ ಅರ್ಥವಾಗಿರಲಿಲ್ಲ. ಆಕೆ ಕೆಲವು ದಿನ ಆ ಯೋಚನೆಯಲ್ಲಿ ಬಾಡಿ ಹೋಗಿದ್ದಳು. ಆಕೆ ಮಾತ್ರ ಆಗಿರಲಿಕ್ಕಿಲ್ಲ ದಕ್ಷಿಣ ಕನ್ನಡದಲ್ಲಿ ಬೀಡಿಯಲ್ಲಿ ಬದುಕು ಕಟ್ಟಿಕೊಂಡ ಹಲವಾರು ಮಂದಿ ಕೂಡಾ. ಮುಂದೆ ಹಠಾತ್ತನೆ ತೀರಿಹೋದ ಅವನಪ್ಪ, ಮನೆಯಿಂದ ಹೊರಹಾಕಿದ ದೊಡ್ಡಪ್ಪ, ನೆಲೆ ಹುಡುಕುತ್ತಾ ಬಂದ ಅವನ ಕುಟುಂಬಕ್ಕೆ ಆಧಾರವಾಗಿದ್ದು ಈ ಬೀಡಿ ಕೆಲಸ. ಈ ಅನುಭವವೇ ಅವನನ್ನು ಇಂದಿಗೂ ತಾನು ಎಷ್ಟು ತಪ್ಪಾಗಿದ್ದೆನ್ನುವುದನ್ನು ತೋರಿಸಿದ್ದು. ಅವನು ಆಕೆಗೆ ಮಾಡಿರಬಹುದಾಗಿದ್ದ ನೋವಿನ ಅನುಭವವಾಗಿದ್ದು.

ಕೋಟೆಯೆಂದು ಕರೆಯುತ್ತಿದ್ದ ಆ ಪರಿಸರದಲ್ಲಿ ಟಿಪ್ಪುವಿನ ಸೈನಿಕರ ಕೋಟೆಯಿತ್ತಂತೆ. ಅವರು ಅಲ್ಲಿ ಕಾವಲು ಕಾಯುತ್ತಿದ್ದರಂತೆ. ಅದಕ್ಕೆ ಕುರುಹಾಗಿ ಮಣ್ಣಿನ ಗುಡ್ಡವೊಂದು ಇಂದು ಕೂಡಾ ಶವದಂತೆ ಬಿದ್ದುಕೊಂಡಿದೆ. ಗುಡ್ಡದಲ್ಲಿ ದಟ್ಟವಾಗಿ ಹರಡಿಕೊಂಡಿದೆ ಮರಗಳು, ಹೆದರಿಕೆ ಹುಟ್ಟಿಸುವಂತಹ ಪೊದೆಗಳು. ಕತ್ತಲಾಗುತ್ತಲೇ ಶುರುವಾಗುವ ಚಿತ್ರ ವಿಚಿತ್ರ ಸದ್ದುಗಳು. ಅಜ್ಜನನ್ನು ಬಿಟ್ಟರೆ ಮತ್ತೆಲ್ಲಾ ಹೆಂಗಸರೆ ಇದ್ದ ಮನೆಯಲ್ಲಿ ಗಂಡೆದೆ ಇದ್ದವಳು ಆಕೆ ಮಾತ್ರ, ರಾತ್ರಿ ಹೊರ ಬರುತ್ತಿದ್ದುದು ಕೂಡಾ. ಆಕೆಗೊಂದು ನಂಬಿಕೆಯಿತ್ತು ಮನೆಯ ಜಾಗದಲ್ಲಿ ಭೂತ-ಪ್ರೇತಗಳ ಉಪದ್ರವಿದೆಯೆಂದು, ಅವು ಮನೆಯ ಮೇಲಿನಿಂದ ರಾತ್ರಿ ಸವಾರಿ ಮಾಡುತ್ತವೆಯೆಂದು ಹಾಗಾಗಿ ಸಾಧ್ಯವಾದರೆ ಆ ಜಾಗ ಬಿಟ್ಟು ಹೋಗಬೇಕೆಂದು, ಅಲ್ಲಿದ್ದರೆ ಬರ್ಕಾತ್ ಇಲ್ಲವೆಂದು. ಆದರೆ ಮರುಕ್ಷಣವೇ ಕುಟುಂಬದ ಭೂತ ಅಲ್ಲಿರುವುದರಿಂದ ಬಿಟ್ಟು ಹೋಗಲು ಜನುಮದಲ್ಲಿ ಸಾಧ್ಯವಿಲ್ಲವೆಂದು ನಿಟ್ಟುಸಿರು ಬಿಡುತ್ತಿದ್ದಳು.

ಅದು ಕೊಂಕಣ ರೈಲ್ವೆಗೆ ಮಾರ್ಗ ನಿರ್ಮಿಸುತ್ತಿದ್ದ ಹೊತ್ತು. ಕಣ್ಣು ಚಾಚಿದಷ್ಟು ದೂರ ಹಸಿರು ಗದ್ದೆ ಕಾಣುತ್ತಿದ್ದ ಜಾಗವನ್ನು ಮಧ್ಯದಿಂದ ಸೀಳಿಕೊಂಡು ಹೊರಟಿದ್ದಾಗ ರೈಲು ಮಾರ್ಗ, ಅಜ್ಜನಿಗೂ ಬೇಸಾಯ ಮಾಡುವುದು ವ್ಯರ್ಥವೆಂಬ ಯೋಚನೆ ಬಂದಿತ್ತು. ಅಸಂಖ್ಯಾತ ಟಿಪ್ಪರುಗಳು, ಬೂಲ್ಡೊಜರುಗಳು ನೆಲವನ್ನು ಸಫಾಯಿ ಮಾಡುತ್ತಿದುದನ್ನು, ತೆಂಗಿನ ಮರಗಳನ್ನು ಉರುಳಿಸುತ್ತಿದನ್ನು ನೋಡಿ ಇಸ್ಸಪ್ಪಾನೆ! ಇಸ್ಸಪ್ಪಾನೆ! ಎನುತ್ತಾ ನೆನ್ನೆಯವರೆಗೆ ದನ ಕರುಗಳನ್ನು ಕಟ್ಟುತ್ತಿದ್ದ ಗದ್ದೆಯನ್ನು ಕಣ್ಮುಚ್ಚದೆ ನೋಡುತ್ತಾ ನಿಂತವಳು, ಜಾಗ ಕಳೆದುಕೊಂಡವರು ಒಳ್ಳೆಯ ಹಣ ಪಡೆದಿದ್ದಾರೆಂಬುದನ್ನು ತಿಳಿದ ಕೂಡಲೆ “ಸೈತುದು ಪೊಯಿನಾ ನೆಟೆಯಾಂಡಲಾ ಪೊತುಂಡಾ” ( ಸತ್ತು ಹೋಗಿದ್ದು ಇಲ್ಲಾದರೂ ಹೋಗಿದ್ದರೆ) ಎಂದು ನೆಟಿಗೆ ಮುರಿದಿದ್ದಳು. ಆಗವಳಿಗೆ ಗೊತ್ತಿರಲಿಲ್ಲ ಹಣ ಪಡೆದವರು ಎಲ್ಲಾದರೂ ಬದುಕು ಕಂಡುಕೊಳ್ಳುತ್ತಾರೆ ಆದರೆ, ಪಲವತ್ತಾದ ಗದ್ದೆಯಲ್ಲಿ ಮಳೆಗಾಲದಲ್ಲಿ ಬೊಲ್ಲಾ ಬಂದು (ನೆರೆ ಬಂದು) ಇನ್ನೂ ಬೇಸಾಯ ಸಾಧ್ಯವಿಲ್ಲವೆಂದು.

ಕೃಷ್ಣ ವರ್ಣದ ಆಕೆ ಅಷ್ಟು ಸುಂದರವಲ್ಲವೆನಿಸಿದರೂ ಆಕೆಯಷ್ಟು ಮನಸ್ಸಿನ ಸೌಂದರ್ಯ ಬೇರೆ ಅವನ ಯಾವ ಚಿಕ್ಕಮ್ಮಂದಿರಿಗೂ ಇರಲಿಲ್ಲ. ಅವಳಿಗೆ ಅವಳದ್ದೆ ಬಾಳಸಂಗಾತಿಯ ಬಗ್ಗೆ ಕನಸುಗಳಿದ್ದವು. ಬಯಕೆಗಳಿದ್ದವು. ದೂರದ ಸಂಬಂದಿಯೊಬ್ಬ ಇಷ್ಟ ಕೂಡಾ ಆಗಿದ್ದ. ಅವನ ಹೆಸರನ್ನು ಹಿಡಿದು ಅಕ್ಕಂದಿರ ಮಕ್ಕಳೆಲ್ಲಾ ಕಿಚಾಯಿಸುತ್ತಿದ್ದರು. ಎಲ್ಲಾ ಸರಿಯಿದ್ದಿದ್ದರೆ ಅವನೊಡನೆ ಮಧುವೆ ನಡೆಯಬೇಕಿತ್ತು. ವರದಕ್ಷಿಣೆಯ ಪೀಡೆ ಅದಕ್ಕೆ ಅಡ್ಡವಾಯಿತು. ಕನಸುಗಳೆಲ್ಲಾ ಪಡುವಣದಲ್ಲಿ ಸಾಗುವ ಕೊಂಕಣ ರೈಲಿನೊಡನೆ ಸದ್ದು ಹಾಗು ಹಾದು ಹೋಗುವ ಗಾಳಿಯೊಡನೆ ಸುಳಿಸುಳಿಯಾಗಿ ಹಾರಿ ಹೋದವು. ಕಾಲದ, ವಿಧಿಯ ಓಟಕ್ಕೆ ಆಕೆ ಅದರಡಿಯಲ್ಲಿನ ಪಟ್ಟಿಯಂತೆ ನಲುಗಿದಳು. ಎಲ್ಲ ಮರೆತಂತೆ ಕಂಡಳು. ಮರೆಯಲಾರದೆ ನೊಂದಳು. ಆತ ಮಾತ್ರ ತನಗಿಂತಲೂ ಪ್ರಾಯದಲ್ಲಿ ದೊಡ್ಡವಳದ ಹುಡುಗಿಯೊಡನೆ ಮದುವೆಯಾಗಿ ಬದುಕು ಕಂಡುಕೊಂಡ- ಬಂದ ವರದಕ್ಷಿಣೆಯಲ್ಲಿ.

ದಿನಗಳು, ವರುಷಗಳು ಕಳೆಯಿತು. ಪ್ರಾಯ ಏರುತ್ತಿತ್ತು. ಅದಾದ ನಾಲ್ಕು ವರುಷದಲ್ಲಿ ಅವಳ ಮದುವೆ ಕೂಡಾ ನಡೆಯಿತು. ಮುಂಬಯಿಯಲ್ಲಿ ಇದ್ದವನಂತೆ. ಆಗಾಗ ಹರಕು ಮುರಕು ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದವನನ್ನು ಕಂಡು, ಕಾದರು ಒಳ್ಳೆಯ ಗಂಡು ಸಿಕ್ಕಿದನೆಂದು ಎಲ್ಲರೂ ಮಾತಾಡಿಕೊಂಡರು. ಕೆಲ ಸಮಯದವರೆಗೆ ಎಲ್ಲಾ ಸರಿಯಿತ್ತು. ದಿನ ಸರಿದಂತೆ ಆತ ದುಡಿಯುತ್ತಿರಲಿಲ್ಲ, ಸಂಬಂಧಿಕರ ಮನೆಗೆಲ್ಲಾ ಹೋಗಿ “ಅವಳಿಗೆ ಹುಷಾರಿಲ್ಲ, ಅಡ್ಮಿಟ್ ಆಗಿದ್ದಾಳೆಂದು” ನೂರೆಂಟು ಸುಳ್ಳುಗಳಿಂದ ಹಣ ಮಾಡುವುದನ್ನು ಶುರು ಮಾಡಿಕೊಂಡ. ಎಲ್ಲಾ ಛೀ! ಥೂ! ಎಂದರು ಮತ್ತೆ, ಜವಾಬ್ದಾರಿಯನ್ನು ಹೊತ್ತುಕೊಂಡಳು. ಉಂಡಾಡಿ ಗಂಡನನ್ನೇ ಸಾಕತೊಡಗಿದಳು. ಬೀಡಿ, ಹೈನುಗಾರಿಕೆ, ತರಕಾರಿ ಬೆಳೆಸಿ, ಅದು-ಇದು ಮಾಡಿ ಗಂಡನ ಮನೆಯಲ್ಲಿ, ಅವನ ಬಗ್ಗೆ ಯಾರೂ ಕೈ ತೋರಿಸದಂತೆ ಎಲ್ಲಾ ತಾನೇ ನಿಭಾಯಿಸತೊಡಗಿದಳು.

ದಿನಗಳು ಉರುಳುತ್ತಿತ್ತು. ಗಂಡ ಮನೆ, ಅವರಿವರ ಮನೆ ಮತ್ತು ಪೇಟೆ ಸುತ್ತಾಡಿಕೊಂಡಿದ್ದ. ಈ ನಡುವೆ, ಮೂರು ನಾಲ್ಕು ವರುಷ ಕಳೆದರೂ ಗರ್ಭ ನಿಲ್ಲಲಿಲ್ಲ. ಆಗ ಅವನು ಅಪ್ಪನನ್ನು ಕಳೆದುಕೊಂಡು ಕರಾವಳಿ ಸೇರಿದ್ದ. ಮತ್ತೋಮ್ಮೆ ತಿಂಗಳು ತುಂಬಿದ ಮಗು ಹೊಟ್ಟೆಯಲ್ಲಿಯೆ ಸತ್ತು ಹೋಗಿತ್ತು. ಆಕೆ ಬಹಳ ಅತ್ತಿದ್ದಳು. ಅಕ್ಕನ ಮಕ್ಕಳಿಗೆಲ್ಲಾ ಸ್ವಂತ ತಾಯಿಯ ಪ್ರೀತಿ ಕೊಟ್ಟಾಕೆಗೆ ಕೊನೆಗೂ ಸ್ವಂತ ಮಗು ಹೇರುವ ಭಾಗ್ಯ ಬರಲಿಲ್ಲ. ಅದರೊಂದಿಗೆ ಗುಸುಪಿಸು ಮಾತುಗಳಲ್ಲಿ ಗಂಡ- ಹೆಂಡತಿಯರಿಬ್ಬರಿಗೂ ಏಡ್ಸ್ ಇದೆಯೆಂಬ ಮಾತು ಅವಳ ಮಲತಾಯಿಯ ಮುಖೇನ ಎಲ್ಲರಿಗೂ ತಿಳಿಯಿತು. ಗುಟ್ಟಿನ ವಿಚಾರ ಅದು ಹೇಗೆ ಪ್ರೋಪೆಶನಲ್ಸ್ ಹೋರಗೆ ತಿಳಿಸಿದರೋ ಅವರ ಒಪ್ಪಿಗೆ ಇಲ್ಲದೆ! ನಿರಾಕರಿಸಿದಳು. ಸುಳ್ಳೆಂದಳು. ಕನಲಿದಳು. ಮುಚ್ಚಿಟ್ಟಳು. ಸಂಬಂಧಿಕರನ್ನೇ ದೂರವಿಟ್ಟಳು. ಅದು ಏಡ್ಸ್ ಅಂದರೆ ಆಸ್ಪತ್ರೆಗಳಲ್ಲಿಯೂ ಅಸ್ಪೃಷ್ಯರಂತೆ ಕಾಣುತ್ತಿದ್ದ ಕಾಲ. ಪ್ರತ್ಯೇಕ ಹಾಸಿಗೆ ನೀಡುತ್ತಿದ್ದ ಸಮಯ.

ಉರುಳು ಹಾಕಿದ ಕಾಲ ಪ್ರತಿ ಉರುಳಿಗೂ ಅನುಮಾನವನ್ನು ಇಮ್ಮಡಿಗೊಳಿಸುತ್ತಿತ್ತು. ಒಂದು ದಿನ ಇದ್ದಕ್ಕಿದಂತೆ ಟೈಫಾಯಿಡ್ ಎಂದು ಮಲಗಿದ ಗಂಡ ಮತ್ತೆ ಏಳಲಿಲ್ಲ. ಇಲ್ಲಿಂದ ಅವಳ ಬಾಳು ದುಸ್ತರವಾಗಿ ಕಾಣಿಸತೊಡಗಿತು. ಅತ್ತೆ ಮನೆಯಲ್ಲೂ ಹೊರ ತಳ್ಳಲ್ಪಟ್ಟಳು. ಕನಿಷ್ಠ ಮಗುವಾದರೂ ಇದ್ದಿದ್ದರೆ ಅವಳನ್ನು ಇಟ್ಟುಕೊಳ್ಳಬಹುದಿತ್ತು. ಅಂಥ ಮಗನೆ! ಹೋದ ಮೇಲೆ ಇನ್ನೇನಿದೆ? ಎಂದು ಬಿಟ್ಟರು. ತವರು ಮನೆಗೆ ಬಂದಾಗ ಮದುವೆಯಾಗದೆ ಉಳಿದ ತಂಗಿಯ ಕಣ್ಣಿನಲ್ಲಿ ಹಲವು ಅನುಮಾನಗಳಿದ್ದವು. ಅದೇಕೆ ಹೀಗೆ? ಇದೇನು? ಎನ್ನುವ ಪ್ರಶ್ನೆಗಳು ಅವಳನ್ನು ವಿಹ್ವಲಗೊಳಿಸುತ್ತಿತ್ತು. ಒಂದುವೇಳೆ ರೋಗದ ಮೂಲ ಗೊತ್ತಾದರೆ ಎಲ್ಲಿ ಹೊರ ಹಾಕುವಳೋ ಎಂದು ಒಳಗೊಳಗೆ ಹೆದರಿಕೊಳ್ಳುತ್ತಿದ್ದಳು.

ದುಡಿಯುವ ಅವಳ ಕೈಗಳು ಆಗಾಗ ರೋಗದ ಹೊಡೆತಕ್ಕೆ ಶರಣಾಗುತ್ತಿದ್ದವು. ಹಣವಿಲ್ಲದೆ ಕೈ ಕಟ್ಟಿಕೊಳ್ಳುತ್ತಿದ್ದವು. ಬೀಡಿ ಕಟ್ಟುತ್ತಿದ್ದ ಕೈಗಳು ಕೊಕ್ಕೆ ಕಟ್ಟಿಕೊಳ್ಳುತ್ತಿದ್ದವು. ನೋವುಗಳನ್ನು ಹೇಳಿಕೊಳ್ಳಲು ಯಾರೂ ಇರಲಿಲ್ಲ. ತವರು ಮನೆಯಲ್ಲೂ ಕಟ್ಟಿ ಹಾಕಿದಂತಹ ಪರಿಸ್ಥಿತಿ. ಆಗಾಗ ಮನೆಗೆ ಬರುತ್ತಿದ್ದ ಆಕೆ ಮನಸ್ಸನ್ನೆಲ್ಲಾ ಅಕ್ಕನ ಮನೆಯಲ್ಲಿ ಬಿಚ್ಚಿ ಹಗುರವಾಗುತ್ತಿದ್ದಳು. ಅವನನ್ನು ಎತ್ತಿಕೊಂಡು ಆಡಿಸಿದ ಕೈಗಳ ಚರ್ಮಗಳು ಎದ್ದಿದ್ದವು. ಅವಳಾಗಿಯೆ ಅವರಿಂದ ದೂರ ಸರಿದು ಕುಳಿತುಕೊಳ್ಳುತ್ತಿದ್ದಾಗ ಅವರ ಮನಸ್ಸು ಹಿಡಿಯಾಗುತ್ತಿತ್ತು. ಅವರು ಹತ್ತಿರ ಬಂದಾಗ ದೂರ ಸರಿಯುತ್ತಿದ್ದಾಕೆಯ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳಿದ್ದವು. ಪ್ರತಿ ಸಲ ಅವನಲ್ಲಿ “ಪಚ್ಚು ನಾನು ಬದುಕುತ್ತೇನೆಯೆ? ಎಂದು ಪ್ರಶ್ನಿಸಿದಾಗ ಏನೂ ಉತ್ತರಿಸಲಿಯೆಂದು ತಿಳಿಯದೆ “ಇಲ್ಲ ಆಂಟಿ ನಿಮಗೇನೂ ಆಗುವುದಿಲ್ಲ, ಔಷಧಿಯಲ್ಲಿ ಗುಣ ಆಗುತ್ತದೆಯೆಂದು” ಹೇಳುತ್ತಿದ್ದ. ಅವನು ಹೇಳಿದ ಹಾಗೆ ಆಗುವುದಿಲ್ಲವೆಂದು ಅವನಿಗೂ ಖಚಿತವಾಗಿ ಗೊತ್ತಿತ್ತು. ಅವಳಿಗೂ ಗೊತ್ತಾಗಿಯಾಗಿತ್ತು. “ಆಗುತ್ತದೆ” ಎಂಬ ಮಾತನ್ನು ಮತ್ತೆ, ಮತ್ತೆ ಹೇಳಿಕೊಂಡು ಒಂದು ನಗುವನ್ನು ಸುಳಿಯ ಬಿಡುತ್ತಿದ್ದಳು ತುಟಿಯಲ್ಲಿ. ತರಗತಿಯಲ್ಲಿ ಟರ್ಮಿನಲ್ ಇಲ್‍ನೆಸ್ ಹಾಗೂ ಮ್ಯಾನೆಜ್‍ಮೆಂಟ್ ಬಗ್ಗೆ ಅವನಿಂದು ಪರಿಣಾಮಕಾರಿಯಾಗಿ ಮಾತಾಡಲು ಬಹುಶಃ ಈ ಅನುಭವವೇ ಕಾರಣವಿರಬಹುದೆಂದು ತಿಳಿದುಕೊಂಡಿದ್ದಾನೆ.

ಅವಳನ್ನು ಅವನು ಕೊನೆಯ ಬಾರಿ ನೋಡಿದ್ದು ಅವನ ಮನೆಯಲ್ಲಿಯೇ. ಆ ದಿನ ಆಕೆ ಸೋತು ಸೊರಗಿದಂತಿದ್ದಳು. ಮೈ ಚರ್ಮವೆಲ್ಲಾ ಸುಲಿದಂತೆ ಎದ್ದಿದ್ದವು. ನಿಂತಲ್ಲೆ ಒಲಾಡುತ್ತಾ ಈಗಲೋ, ಅಗಲೋ ನೆಲಕ್ಕೆ ಉರುಳುವಂತಿದ್ದಳು. ಮೈನಲ್ಲಿ ಮೂಳೆಗಳೆದ್ದು ಕಾಣುತ್ತಿದ್ದವು. ಆ ದಿನ ಅವನ ಅಮ್ಮ ಹತ್ತಿರ ಬಂದವಳು ಒಂದು ನೂರು ರೂಪಾಯಿ ಇದ್ದರೆ ಅವಳಿಗೆ ಕೊಡೆಂದಳು. ಇದು ಅಂತಿಮ ಬೇಟಿಯಾಗಬಹುದೆಂದು ಅವನು ಎಣಿಸಿರಲಿಲ್ಲ. ಅವನ ಕೈನಲ್ಲಿ ಹಣವೆ ಇರಲಿಲ್ಲ. ಇದ್ದುದರಲ್ಲೇ ಕೈಗಿತ್ತ ಐವತ್ತು ರೂಪಾಯಿಯನ್ನು ನಿರಾಕರಿಸಿದಳು. “ಇರಲಿ ಫ್ರೂಟ್ಸ್ ತಿನ್ನಲಾಗುವುದೆಂದ”. ಮೀನೆಂದರೆ ಪ್ರಾಣ ಬಿಡುತ್ತಿದ್ದವಳು ಮೀನು ಸಾರಿನ ಊಟ ಮಾಡಿ ಹೋದವಳು ಮತ್ತೆ ತಿರುಗಿ ಬರಲಿಲ್ಲ.

ಆಕೆಯ ಶವ ಸಂಸ್ಕಾರಕ್ಕೂ ಎನೋ ಕಾರಣದಿಂದಾಗಿ ಅವನಿಗೆ ಹೋಗಲಾಗಲಿಲ್ಲ. ಬೇಸಿಗೆ ರಜೆಗೆ ಬಂದವರನ್ನು ಕಣ್ಣೀರಿನಿಂದ ಕಳುಹಿಸಿ ಕೋಡುತ್ತಿದ್ದ ಆಕೆಯನ್ನು ಒಂದು ತೊಟ್ಟು ಕಣ್ಣೀರು ತುಳುಕಿಸಿ ಕಳುಹಿಸಿ ಕೊಡಲಾಗಲಿಲ್ಲವೆನ್ನುವ ನೋವು ಈಗಲೂ ಅವನಲ್ಲಿ ಉಳಿದುಕೊಂಡಿದೆ. ಸಾಯುವ ಮೊದಲು ಆಕೆ ಶವ ಸಂಸ್ಕಾರಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು, ಎಣ್ಣೆಯಿಂದ ಹಿಡಿದು ಆಕೆಯೆ ಕೊಂಡು ತಂದಿದ್ದಳಂತೆ (ಕಟ್ಟಿಗೆ ಮತ್ತು ಬಟ್ಟೆಯನ್ನು ಹೊರತುಪಡಿಸಿ) ಆಮೇಲೆ ತಿಳಿಯಿತು ಅವನಿಗೆ. ಕೊನೆಗೂ ಆಕೆ ಯಾರಿಗೂ ಭಾರವಾಗಲಿಲ್ಲ. ಸತ್ತ ಮೇಲೆ ತನ್ನ ತಿಥಿಗೆ ಕೂಡಾ ಆಕೆ ಉಳಿಸಿಹೋಗಿದ್ದ ಹಣ ವಿನಿಯೋಗಿಸಲ್ಪಟ್ಟಿತ್ತು. ಸತ್ತ ಮೇಲೂ ತಮ್ಮನ ಹೆಂಡತಿಗಾಗಲೀ, ಸ್ವಂತ ತಂಗಿಗಾಗಲೀ ಯಾವ ರೋಗದಿಂದ ತೀರಿಕೊಂಡಿದೆಂದು ತಿಳಿಯಲಿಲ್ಲ. ಆದರೆ ಬೇಸರದ ವಿಷಯವಾದರೆ ಅವಳ ಕೊನೆಯ ದಿನದಲ್ಲಿ ಅವಳಿಗೆ ಭಾವನಾತ್ಮಾಕವಾಗಿ ಯಾರೂ ದೈರ್ಯ ತುಂಬಲಿಲ್ಲ. ಅವಳನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ. ಊಟ ಸೇರದ ಹೊತ್ತಿನಲ್ಲೂ ಅವಳ ಬಗ್ಗೆ ವಿಚಾರಿಸಲು ಮನೆಯವರು ಹತ್ತಿರ ಹೋಗಲಿಲ್ಲ. ಮಲಗಿದಲ್ಲೇ ಕೊರಡಾದಳು.

ಸಾಯುವೆನೆಂದು ಗೊತ್ತಿದ್ದು ಸಾವನ್ನು ಎದುರಿಸಿದ್ದು, ಬದುಕನ್ನು ಆಕೆ ತೆಗೆದುಕೊಂಡ ಬಗೆ ಬದುಕಿನ ಬಗೆಗಿದ್ದ ಪಾಸಿಟಿ ಅಪ್ರೋಚನ್ನು ಈಗ ತೋರಿಸುತ್ತಿದೆ. ಚಿಕ್ಕದಿರುವಾಗ ಅವನಿಗೆ ಹತ್ತು, ಇಪ್ಪತ್ತು ರೂಪಾಯಿಯನ್ನು ರಜಾ ದಿನ ಕಳೆದು ಹಿಂತಿರುಗುವಾಗ ಕೊಡುತ್ತಿದ್ದಾಕೆ ಅವನು ಕೊಟ್ಟ ಐವತ್ತು ರೂಪಾಯಿನ ಬಗ್ಗೆ ಸಾಯುವ ಕೊನೆಯ ದಿನದವರೆಗೆ ಹೇಳುತ್ತಾ, ಅವಳ ಬಳಿ ಯಾರನ್ನೂ ಸುಳಿಯಲು ಬಿಡದಿರುತ್ತಿದನ್ನು ಗೊತ್ತಾದ ಮೇಲಿನಿಂದ, ನೆನೆಸಿಕೊಂಡು ಈಗಲೂ ಮತ್ತೆ ಮತ್ತೆ ಆರ್ದ್ರಗೊಳ್ಳುತ್ತಿದ್ದಾನೆ. ಯಾರೂ ಸ್ನಾನ ಮಾಡಿಸಲು ಒಪ್ಪದೆ ಇದ್ದುದರಿಂದ ತೀರಿಕೊಳ್ಳುವ ನಾಲ್ಕು ದಿನದ ಮೊದಲು ಸ್ನಾನ ಮಾಡಿಸಲು ಹೋದ ಅವನ ಅಮ್ಮನಲ್ಲಿ, ಕೊನೆಯ ಕ್ಷಣ ಎಣಿಸುತ್ತಿದ್ದಾಕೆ, ಸಾಯುವ ಕೊನೆಯ ಕ್ಷಣದಲ್ಲೂ ಋಣ ಮರೆಯದೆ ಆಕೆಯ ಮದುವೆಗೆ ಅವನಪ್ಪ ಹಣದ ನೆರವಿತ್ತ ನೆನಪಿನಲ್ಲಿ ಹಣಕ್ಕೆ ಬದಲಾಗಿ, ನನ್ನಲ್ಲಿ ಇಷ್ಟೇ ಇರುವುದೆಂದು ಐದು ಗ್ರಾಂನ ಬಂಗಾರದ ಕಿವಿಯೊಲೆಯನ್ನು ಕೈನಲ್ಲಿ ಕೊಟ್ಟು ನಡೆದಿದ್ದಳು.

ಈಗಲೂ ಆಕೆಯೆಂದರೆ ಅವನಿಗೆ ನೆನಪಾಗುವುದು ಆಕೆಯಲ್ಲಿದ್ದ ಜೀವನೋತ್ಸಾಹ, ಬಡತನದಲ್ಲಿ ಹುಟ್ಟಿದ, ಪ್ರಪಂಚ ತಿಳಿಯುವ ಮೊದಲೆ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಕೈ ಕೆಳಗೆ ಬೆಳೆದು ಒಂದು ಹೊತ್ತಿನ ಊಟಕ್ಕೆ ತಾತ್ವರ ಪಟ್ಟರೂ ಕಳೆದುಕೊಳ್ಳದ ಜೀವನ ಪ್ರೀತಿ, ಸಾವನ್ನು ಎದುರಿಸಿದ ರೀತಿ.

ಈಗ ಎಂ.ಎಸ್.ಡಬ್ಲುನಲ್ಲಿರುವಾಗ ಸೆಮಿನಾರ್‍‍ನಲ್ಲಿ, ತರಗತಿಯಲ್ಲಿ ವೀಣಾಧರಿಯ ಬಗ್ಗೆ ಮಾತಾಡುವಾಗ, ಅವನಿಗೆ ನೆನಪಾಗಿ ಕಾಡುತ್ತಿರುವ ಆಕೆ ಬೇರೆ ಯಾರು ಅಲ್ಲ ಅವನ ಪ್ರೀತಿಯ ಅವಿಧ್ಯಾವಂತೆ ಚಿಕ್ಕಮ್ಮ ಯಶೋದ ಆಂಟಿ ಆಗಿದ್ದಳು.

%d bloggers like this: