ಪ್ರೇಮದಲ್ಲಿ ಜಗದ ಶಾಂತಿ

ಬೀದಿಗಳು, ಧರ್ಮಗಳು
ಊರು-ಕೇರಿಗಳು, ಜನರೂ
ರಕ್ತ ಬಲಿ ಪಡೆಯುವ ಮದ ಉತ್ಸಾಹದಲ್ಲಿರುವಾಗ
ನಿನ್ನ ಕವಿತೆ ಪ್ರೇಮರಾಗ ಹಾಡುವುದೇಕೆ?
ತರಾಟೆಗೆ ತೆಗೆದುಕೊಳ್ಳುವಳು.

ನಾನವಳ ಕಣ್ಣಿನಲ್ಲಿ ಸ್ಥಿರಗೊಳ್ಳುವೆ
ಕ್ರಿಶ್ಚಿಯನರ ಎಳೆ ಹುಡುಗಿಯ ಕಣ್ಣಿನಲ್ಲಿ
ಯೇಸು, ಕೃಷ್ಣ, ಬುದ್ಧ, ಅಲ್ಲಾ ಒಟ್ಟೊಟ್ಟಾಗಿ ಕಾಣಿಸುವರು
ಮತ್ತೇಕೆ ಈ ವೈರುಧ್ಯ?
ಪ್ರಶ್ನಿಸಬಾರದೆ ನಿನ್ನ ಕವಿತೆಯೆನ್ನುವಳು.

ನಾನವಳ ತೊಡೆಯಲ್ಲಿ ಮಗುವಾಗುವೆ
ಎದೆಯಲ್ಲಿ ಮುಖವಿರಿಸುವೆ
ಪ್ರೇಮದ ಉತ್ತುಂಗತೆಯಲ್ಲಿ ಮುಳುಗೆಳುವೆ.

ಜಗತ್ತು ಪ್ರೀತಿ ಮರೆತಿದೆ ಹುಡುಗೀ
ನಾನವರಿಗೆ ಪ್ರೇಮವ ತೋರಿಸುತ್ತಿರುವೆಯೆನುತಾ
ಆಲಿಂಗನದಲ್ಲಿ ಜಗದ ಶಾಂತಿಯ ಕಾಣುವೆ

ನಮ್ಮೀಬ್ಬರ ಜಗದಲಿ
ಜಗದ ವೈಷಮ್ಯಗಳು ಮರೆತು ಹೋಗುವವು.

(ಕೆಂಡ ಸಂಪಿಗೆಯಲ್ಲಿ ಪ್ರಕಟಿಸಿದ ಅಬ್ದುಲ್ ರಶೀದರಿಗೆ ಧನ್ಯವಾದಗಳು)

%d bloggers like this: