ಅಳುವ ಹೃದಯದ ಗಜ಼ಲ್ ಹಾಡು

ಅದೊಂದು ನದಿ ತೀರದ ಅಳಿವೆಯ ಪ್ರದೇಶವಾಗಿತ್ತು. ರಸ್ತೆಯ ಪಕ್ಕದಲ್ಲಿ ಹರಿಯುತ್ತಿದ್ದ ಆ ವಿಶಾಲವಾದ ನದಿ ತಣ್ಣನೆ ಹರಿಯುತ್ತಿತ್ತು. ಗಾಳಿ ಕೂಡಾ ಪಡುವಣದಿಂದ ಎಂದಿಗಿಂತ ಜಾಸ್ತಿ ಬೀಸುತ್ತಿತ್ತು. ಅತ್ತ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಚಲಿಸುತ್ತಿದ್ದ ವಾಹನಗಳು ಸದ್ದು ಮಾಡಿಕೊಂಡು ಸೆತುವೆಯಲ್ಲಿ ಚಲಿಸುತ್ತಿದ್ದುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ನಮ್ಮೀಬ್ಬರ ನಡುವೆ ಮೌನವಿತ್ತು. ಹೀಗೆ ಹರಿಯುತ್ತಿದ್ದ ನದಿ ಒಂದು ಮೈಲಿ ದೂರದಲ್ಲಿ ಕಡಲಿನೊಂದಿಗೆ ಒಡಲಿಗಿಳಿದು ನಂಟು ಸ್ಥಾಪಿಸುತ್ತಿತ್ತು. ನಮ್ಮೀಬ್ಬರ ನಡುವೆ ಇನ್ನೂ ಹಿಂದೆ ತಿರುಗಿ ಬರದು ಹಿಂದಿನ ಮಾತುಗಳು ಅನ್ನುವಷ್ಟು ಮಾತಿಗೆ ಬರಬಂದಿತ್ತು. ಆ ಸಂಚಾರವಿಲ್ಲದ ಮಣ್ಣಿನ ದಾರಿಯಲ್ಲಿ ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹಾಳು ಬಿದ್ದಿತ್ತು. ಆಕೆ ಯಾವಾಗಲೂ ಮಾಡುವ ಹಾಗೆ ಸತಾಯಿಸಿ ಬಗಲಿಗೆ ಜೊತು ಬಿಡಬಹುದು ಅಂದುಕೊಂಡೆ. ಆಕೆ ನೆಲ ನೋಡುತ್ತಾ ಅಂತರವನ್ನಿಟ್ಟಿದ್ದಳು.

ಮಾತುಗಳು ಸಲೀಸಾಗಿರಲಿಲ್ಲ. ಎರಡು ವರುಷದ ಪ್ರೀತಿಯಲ್ಲಿ ಒಂದು ದಿನವೂ ಈ ರೀತಿಯದ್ದಾಗಿರಲಿಲ್ಲ. ಕಾಲೇಜು ಮುಗಿಯಲು ಇನ್ನೂ ಕೆಲವೇ ದಿನವಿತ್ತು. ನಾನು ಬಯಸುತ್ತಿದ್ದ ಆ ನೀಲ ಕಂಗಳು ನನ್ನನ್ನು ನೋಡಲಿಲ್ಲ. ಒಂದು ಸಲ ನೋಡೆಂದೆ. ಆಗದು ಅಂದಳು. ಗೇರು ಬೀಜದ ಮರಗಳು ಸುಯ್ದಡಿದವು. ಮರೆತು ಬಿಡೆಂದಳು. ಹೇಗೆ?ಪ್ರಶ್ನಿಸಿದೆ. ಎಲ್ಲವೂ ಸಾಧ್ಯವೆಂದಳು. ನಾನು ಕ್ರಿಶ್ಚಿಯನ್, ನೀನು ಹಿಂದೂ ಮನೆಯಲ್ಲಿ ಒಪ್ಪುವುದಿಲ್ಲ, ಈಗಲೇ ಬಯ್ಯುತ್ತಿದ್ದಾರೆ ನಿನ್ನ ಹತ್ತಿರ ಮಾತಾಡುವುದಕ್ಕೆ ಎಂದಳು.

ತತಪ್ಪಾಯಿತು ಕಣೋ ಕ್ಷಮಿಸಿಬಿಡು ನಿನ್ನ ಬಾಳಿನಲ್ಲಿ ಆಟವಾಡಿದ ಹಾಗಯಿತು ಅಂದಳು. ನನ್ನ ಬಳಿ ಬರೀ ಒಂದು ನಗುವಿತ್ತು. ಅದು ಕೂಡಾ ಹತಾಶೆಯದು. ಹಾಗಂತ ನಾನು ನಿನ್ನನ್ನು ಪ್ರಿತಿಸಲಿಲ್ಲವೆಂದಲ್ಲ. ಈಗಲೂ ಪ್ರೀತಿಸುತ್ತೇನೆ. ಅದು ಕೊನೆಯವರೆಗೆ ಇರುವುದೆಂದಳು. ನನ್ನ ಕಣ್ಣಲ್ಲಿ ಕಣ್ಣೀರಿತ್ತು. ಅವಳಲ್ಲೂ. ಪ್ರತಿಸಲ ಸೋತಾಗ ನನ್ನ ಕೈ ಹಿಡಿದ ದೇವತೆಯಾಕೆ. ಅವಳ ಮೇಲಿನ ಗೌರವದಿಂದಲೇ ಆಕೆಯನ್ನು ಬಿಟ್ಟು ಕೊಟ್ಟು ನೋಡುತ್ತಲೇ ನಿಂತೆ.

ಆಕೆ ಚೆನ್ನಾಗಿರು ಬೈ ಅನ್ನುತ್ತಾ ನಡೆಯತೊಡಗಿದಳು. ಯಾವಾಗಲೂ ಸಿಗುತ್ತಿದ್ದ ಮುತ್ತು ಕಳೆದು ಹೋಗಿತ್ತು. ಕೆಳ ಬೇಕೆಂದುಕೊಂಡೆ ಕೊನೆಯ ಬಾರಿಗೆ ಆಕೆ ನನ್ನ ಅಂಗಳ ದಾಟಿಯಾಗಿತ್ತು. ಆ ದಾರಿಯುದ್ದಕ್ಕೂ ಹಿಂದಿರುಗುತ್ತಾ ನನ್ನ ನೋಡುತ್ತಾ ಕೊನೆಗೆ ಕಾಣದ ಚುಕ್ಕಿಯಾಗಿ ದಾರಿಯಲ್ಲಿ ಮಾಯವಾದಳು. ಎದೆಯಲ್ಲಿ ಅಳು ಉಕ್ಕುಕ್ಕಿ ಬರುತ್ತಿತ್ತು. ಹಾಗೆ ನಿಂತು ಹರಿವ ನದಿಯನ್ನು ನೋಡಿದೆ. ವಿರಹ ವೇದನೆಯ ಗಜ಼ಲ್ ಹುಟ್ಟಿತು….ಹೃದಯ ಅಳುತಿತ್ತು..  ಅಳುವ ಹೃದಯದ ಗಜ಼ಲ್..ಹಾಡುತ್ತಿತ್ತು


ಸಂಜೆಗಾವಳದಲ್ಲಿಳಿವ ಕಪ್ಪು ಮುಸುಕುವಾಗ ಭುವಿಯ

ಯಥಾ ನಿನ್ನ ತೋಳಿನಪ್ಪುಗೆಯದೆ ನೆನಪೆನುತ್ತಾ ಉನ್ಮಾತ್ತನಾಗುವೆ.

ಮಾತಿರದವಳಲ್ಲಿ ನನ್ನೀ ಬಗಲು ತೋಳಿನಾಸರೆಗೆ ಕಾದಿದೆ

ಜೊತುಬಿಡು ಬಗಲಿಗೆ ನಾ ಜಗವನೆ ಮರೆಯುವೆನೆನುವೆನು.

ನಡುವಿನಂತರ ಕುಗ್ಗಿಸದೆ ದೃಷ್ಟಿಯನತ್ತಿತ್ತ ಚೆಲ್ಲಿ

ಜಗದಲಿ ಹಪಹಪಿಸಲೇನಿದೆ ಕನಸೆಲ್ಲಾ ನನಸಾದರೆ ಅನ್ನುವಳು.

ವೃಥಾ ಮಾತೇಕೆ? ಮುಡಿಪಾಗಿಟ್ಟಿರುವೆ ಎದೆಯ ನಿನಗೆ

ಕೊಚ್ಚಿ ಹೋದರೂ ವಸಂತಗಳು ನನಗೆ ನೀನೆಯೆನುತ್ತಾ ನೋಡುವೆ.

ಎಲ್ಲೇ ಮೀರಿದ ಅಳಿವೆಯಂತೆ ನಮ್ಮೀ ಸಮ್ಮೀಲನ

ನಾ ಸೀಮೆಯಲ್ಲೇ ಹರಿಯಬಯಸುವೆ ಹರಿಯಗೊಡೆನುವಳು.

ಮೌನ, ನಿಟ್ಟುಸಿರ ಭಾರಕ್ಕೆ ಅಳುವ ಹೃದಯ ಗಜ಼ಲ್ ಹಾಡುವುದು

ತೀರದುದ್ದಕ್ಕೂ ತಿರುತಿರುಗಿ ದಿಟ್ಟಿಸುತ್ತಾ ನಡೆವೆವು ಹಿಂತಿರುಗಲಾಗದ ನಾವು


(ಕೆಂಡ ಸಂಪಿಗೆಯಲ್ಲಿ ಪ್ರಕಟಿಸಿದ ಅಬ್ದುಲ್ ರಶೀದರಿಗೆ ಧನ್ಯವಾದಗಳು)

%d bloggers like this: